ತುಮಕೂರು (Tumakuru)-ಮಕ್ಕಳಾಗುವುದಕ್ಕಾಗಿ ನಕಲಿ ವೈದ್ಯರ ಬಳಿ ಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ.
ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಮಮತಾ (32) ಮೃತಪಟ್ಟ ಮಹಿಳೆ. ಮಕ್ಕಳ ಭಾಗ್ಯ ಕಲ್ಪಿಸುವುದಾಗಿ ಹಣ ಪಡೆದ ಮಂಡ್ಯ ಮೂಲದ ನಕಲಿ ವೈದ್ಯ ದಂಪತಿಗಳು ಮಮತಾ ಅವರನ್ನು ನಕಲಿ ಐವಿಎಫ್ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇದರಿಂದ ಮಹಿಳೆ ಸಾವನ್ನಪ್ಪಿದ್ದಾರೆ.
ನಕಲಿ ವೈದ್ಯ ದಂಪತಿಗಳಾದ ವಾಣಿ ಮತ್ತು ಮಂಜುನಾಥ್ ಎಂಬವರು ತಿಪಟೂರು, ತುರುವೇಕೆರೆ, ಅರಸೀಕೆರೆ ಭಾಗದ ಹಲವಾರು ಗ್ರಾಮಗಳಲ್ಲಿ ಮಕ್ಕಳಿಲ್ಲದ ದಂಪತಿಯಿಂದ ಲಕ್ಷಂತರ ರೂ. ಲಪಟಾಯಿಸಿದ್ದಾರೆ. ನಕಲಿ ವೈದ್ಯ ದಂಪತಿಗಳು ಕೇವಲ ಎಸ್ ಎಸ್ ಎಲ್ ಸಿ ಓದಿದ್ದಾರೆ ಎಂಬ ವಿಚಾರ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮಮತಾ ಅವರಿಗೆ ಮಲ್ಲಿಕಾರ್ಜುನ್ ಅವರೊಂದಿಗೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿತ್ತು. ಮಕ್ಕಳಾಗದ ಕಾರಣ ಹಲವು ಆಸ್ಪತ್ರೆ ಅಲೆದಾಡಿ ನೊಂದಿದ್ದರು. ಬಳಿಕ ವಾಣಿ ಮತ್ತು ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ ಮಕ್ಕಳಾಗುವಂತೆ ಐವಿಎಫ್ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿದ್ದಾರೆ.
ಮಮತಾ, ಮಲ್ಲಿಕಾರ್ಜುನ್ ಅವರಿಂದ 4 ಲಕ್ಷ ರೂ. ಹಣ ಪಡೆದು 4 ತಿಂಗಳ ಕಾಲ ನಕಲಿ ಐವಿಎಫ್ ಚಿಕಿತ್ಸೆಯನ್ನು ನೀಡಿದ್ದಾರೆ. ನಂತರ ಗರ್ಭದಲ್ಲಿ ಮಗು ಬೆಳೆಯುತ್ತಿದೆ ಎಂದು ನಂಬಿಸಿ ಮತ್ತಷ್ಟು ಹಣ ಪಡೆದಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಮಮತಾ ಹೊಟ್ಟೆ ನೋವಿಯಿಂದ ಆಸ್ಪತ್ರೆಗೆ ದಾಖಲಾದಾಗ ನಕಲಿ ಚಿಕಿತ್ಸೆ ಬಗ್ಗೆ ತಿಳಿದುಬಂದಿದೆ.
ಬಳಿಕ ತೀವ್ರ ಅನಾರೋಗ್ಯಕ್ಕೆ ಒಳಗಾದ ಮಮತಾ ನಕಲಿ ಚಿಕಿತ್ಸೆಯ ಪರಿಣಾಮವಾಗಿ ಗರ್ಭಕೋಶ, ಕಿಡ್ನಿ, ಹೃದಯ ಹಾಗೂ ಮೆದುಳು ಸಂಬಂಧಿತ ಖಾಯಿಲೆಗೆ ತುತ್ತಾಗಿದ್ದಾರೆ. ಇವರನ್ನು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಸತತ ಮೂರು ತಿಂಗಳು ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇದರಿಂದ ಬೇಸತ್ತ ಮಮತಾ ಅವರ ಪತಿ ಅವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಜನವರಿ 19 ರಂದು ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ವಾಣಿ ಉಡುಪಿ ಮೂಲದವರಾಗಿದ್ದು, ಮಂಜುನಾಥ್ ಮಂಡ್ಯ ಮೂಲದವರಾಗಿದ್ದು, ಇವರಿಬ್ಬರು ಎಸ್ ಎಸ್ ಎಲ್ ಸಿ ಪಾಸಾಗಿದ್ದು, ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎಂಬುದು ತಿಳಿದುಬಂದಿದೆ.