ಮನೆ ಅಪರಾಧ ಬೇಲೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ: ಅರಕಲಗೋಡಿನಲ್ಲಿ ಒಂಟಿ ಸಲಗ ಅನುಮಾನಸ್ಪದ ಸಾವು

ಬೇಲೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ: ಅರಕಲಗೋಡಿನಲ್ಲಿ ಒಂಟಿ ಸಲಗ ಅನುಮಾನಸ್ಪದ ಸಾವು

0

ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟ ಬೆನ್ನಲ್ಲೇ ಅರಕಲಗೂಡು ತಾಲೂಕಿನ ನೆಲಬಳ್ಳಿ ಗ್ರಾಮದಲ್ಲಿ ಒಂಟಿ ಸಲಗವೊಂದು ಅನುಮಾನಸ್ಪದವಾಗಿ ಮೃತಪಟ್ಟಿದೆ.

ಸುಮಾರು 25ವರ್ಷದ ಗಂಡಾನೆಯ ಮೃತದೇಹ ಇಲ್ಲಿನ ರೈತರೊಬ್ಬರ ಜಮೀನಿನಲ್ಲಿ ಪತ್ತೆಯಾಗಿದ್ದು, ವಿದ್ಯುತ್ ಸ್ಪರ್ಶ ಅಥವಾ ಗುಂಡೇಟಿನಿಂದ ಮೃತಪಟ್ಟಿರಬಹುದು ಎಂಬ ಶಂಕೆ ‌ವ್ಯಕ್ತವಾಗಿದೆ.

ಸ್ಥಳೀಯ ರೈತರು ಬೆಳಿಗ್ಗೆ ಜಮೀನಿನ ಬಳಿ ಹೋದಾಗ ಆನೆಯ ಮೃತದೇಹ ಕಂಡು ಬಂದಿದ್ದು, ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಇಟಿಎಫ್ ತಂಡ(ತುರ್ತು ರಕ್ಷಣಾ ತಂಡ) ಪರಿಶೀಲನೆ ನಡೆಸಿತು.

ನಿನ್ನೆಯಷ್ಟೇ ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ಕಾಡಾನೆ ದಾಳಿಗೆ ಸುಶೀಲಮ್ಮ (63) ಎಂಬುವರು ಮತಪಟ್ಟಿದ್ದರು. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ನಡೆಸಿದ ಕಾಡಾನೆಯು ಸೊಂಡಿಲಿನಿಂದ ಎತ್ತಿ ಬಿಸಾಡಿ, ಕಾಲಿನಿಂದ ತಲೆಯನ್ನು ತುಳಿದು ಸಾಯಿಸಿತ್ತು.

ಕಳೆದ 2 ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ಈ ಭಾಗದಲ್ಲಿ ನಾಲ್ವರು ಮೃತಪಟ್ಟಿದ್ದು, ಮಾನವ–ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕೋಗೋಡು ಹಾಗೂ ಬೊಮ್ಮನಹಳ್ಳಿ ಗ್ರಾಮಸ್ಥರು ಚೀಕನಹಳ್ಳಿ-ಬೇಲೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.