ಮನೆ ಅಪರಾಧ ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ: ಆರೋಪಿ ಬಂಧನ

ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ: ಆರೋಪಿ ಬಂಧನ

0

ಬೆಂಗಳೂರು: ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಪೀಡಿಸಿದಲ್ಲದೆ, ಅದನ್ನು ನಿರಾಕರಿಸಿದಕ್ಕೆ ಆಕೆಯ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಕೆ.ಜಿ.ಹಳ್ಳಿ ನಿವಾಸಿ ಅಬಾರ್ಜ್‌ (24) ಬಂಧಿತ ಆರೋಪಿ.

ಕೆ.ಜಿ.ಹಳ್ಳಿಯಲ್ಲಿ ಸಣ್ಣ- ಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿ ಹಾಗೂ ದೂರುದಾರ ವಿವಾಹಿತ ಮಹಿಳೆ ದೂರದ ಸಂಬಂಧಿಗಳಾಗಿದ್ದಾರೆ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಟೈಲರಿಂಗ್‌ ಕೆಲಸ ಮಾಡುತ್ತಿರುವ ಪತಿ ಹಾಗೂ ಮೂವರು ಮಕ್ಕಳ ಜತೆ ಸಾರಾಯಿಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಈ ಮಧ್ಯೆ ಆರೋಪಿ, ಕೆಲ ತಿಂಗಳಿಂದ ದೂರುದಾರ ಮಹಿಳೆಗೆ ಪತಿಯಿಂದ ವಿಚ್ಛೇದನ ಪಡೆದುಕೊಂಡು ತನ್ನೊಂದಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ವಿಚಾರವನ್ನು ತನ್ನ ಗಂಡನಿಗೂ ತಿಳಿಸಿದ್ದರು. ಹೀಗಾಗಿ ಹಿರಿಯರ ಸಮ್ಮುಖದಲ್ಲಿ ಮಹಿಳೆಗೆ ಮತ್ತೂಮ್ಮೆ ತೊಂದರೆ ಕೊಡದಂತೆ ಎಚ್ಚರಿಕೆ ನೀಡಿ ಸಂಧಾನ ಮಾಡಲಾಗಿತ್ತು.

ಆದರೆ, ಆರೋಪಿ ಕೆಲ ದಿನಗಳ ಕಾಲ ಸುಮ್ಮನಿದ್ದು ನಂತರ ಮತ್ತೂಮ್ಮೆ ಆಕೆಗೆ ಕರೆ ಮಾಡಿ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಾನೆ. ಅದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ದೂರುದಾರೆ ಮಕ್ಕಳ ಜತೆ ರಂಜಾನ್‌ ಹಬ್ಬದ ಪ್ರಯುಕ್ತ ಏ.10ರಂದು ರಾತ್ರಿ ಡಿ.ಜಿ.ಹಳ್ಳಿ ಯಲ್ಲಿರುವ ಸಹೋದರಿಯ ಮನೆಗೆ ಹೋಗಿ, ಅಲ್ಲಿಂದ ಶಿವಾಜಿನಗರಕ್ಕೆ ಶಾಪಿಂಗ್‌ಗೆ ಬಂದಿದ್ದರು. ಬಳಿಕ ಸಮೀಪದಲ್ಲೇ ಟೈಲರಿಂಗ್‌ ಕೆಲಸ ಮಾಡುತ್ತಿದ್ದ ಪತಿ ಜತೆ ಏ.11ರ ನಸುಕಿನ ಮಾತಾಡಿಕೊಂಡು ಕುಳಿತಿದ್ದರು.

ಈ ವೇಳೆ ಮುಂಜಾನೆ 4 ಗಂಟೆ ಸುಮಾರಿಗೆ ಮನೆ ಸಮೀಪದ ವ್ಯಕ್ತಿಯೊಬ್ಬರು ಕರೆ ಮಾಡಿ, ನಿಮ್ಮ ಮನೆಗೆ ಬೆಂಕಿ ಬಿದ್ದಿದ್ದೆ ಎಂದಿದ್ದಾರೆ. ಅದರಿಂದ ಗಾಬರಿಕೊಂಡು ಹೋಗಿ ನೋಡಿದಾಗ, ಮನೆಯಲ್ಲಿದ್ದ ಎಲೆಕ್ಟ್ರಾನಿಕ್‌ ವಸ್ತುಗಳು ಸೇರಿ ಎಲ್ಲವೂ ಸುಟ್ಟು ಕರಕಲಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದರು.

ಈ ಮಧ್ಯೆ ಆರೋಪಿ ಅರ್ಬಾಜ್‌, ದೂರುದಾರ ಮಹಿಳೆಯ ಪತಿಗೆ ಕರೆ ಮಾಡಿ ಮನೆಗೆ ಬೆಂಕಿ ಹಚ್ಚಿದ್ದೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ಆದರೂ ದೂರುದಾರ ಮಹಿಳೆ ಮತ್ತು ಆಕೆಯ ಪತಿ ಅರ್ಬಾಜ್‌ ಮೇಲೆ ದೂರು ನೀಡಿರಲಿಲ್ಲ.

ಆ ನಂತರ ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಅರ್ಬಾಜ್‌ ವಿರುದ್ಧ ದೂರು ನೀಡಿದ್ದು, ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.