ಮೈಸೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ನಾರಿ ನ್ಯಾಯ ಐದು ಗ್ಯಾರಂಟಿಗಳು ಮಹಿಳೆಯರ ಸ್ವಾವಲಂಬನೆ ಮತ್ತು ರಕ್ಷಣೆಗೆ ಒತ್ತು ನೀಡಲಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರೂ ಆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ನಾರಿ ನ್ಯಾಯ ಗ್ಯಾರಂಟಿ ಪೋಸ್ಟರ್ ಅನ್ನು ಅನಾವರಣಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿ ಅವರು ಘೋಷಿಸಿರುವ ಗ್ಯಾರಂಟಿಗಳು ದೇಶದ ಅರ್ಧದಷ್ಟು ಮಹಿಳೆಯರಿಗೆ ನ್ಯಾಯ ದೊರಕಿಸಲಿವೆ ಎಂದು ನುಡಿದರು.
ನಾರಿ ನ್ಯಾಯ: ಮಹಾಲಕ್ಷ್ಮೀ ಗ್ಯಾರಂಟಿಯಲ್ಲಿ ಬಡ ಕುಟುಂಬಕ್ಕೆ ವಾರ್ಷಿಕ 1 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದೇವೆ. ಅಧಿಕಾರ್ ಮೈತ್ರಿ ಮೂಲಕ ದೌರ್ಜನ್ಯಕ್ಕೆ ತುತ್ತಾದ ಹೆಣ್ಣು ಮಕ್ಕಳಿಗೆ ಕಾನೂನಿನ ನೆರವು ದೊರೆಯಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಕೀಲರನ್ನು ನೇಮಕ ಮಾಡಲಾಗುತ್ತಿದೆ. ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ, ಆಶಾ ಕಾರ್ಯಕರ್ತೆಯರ ಸಂಬಳ ದ್ವಿಗುಣ, ಉದ್ಯೋಗ ನಿರತ ಮಹಿಳೆಯರಿಗಾಗಿ ಅಕ್ಷರದ್ವ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಗ್ಯಾರಂಟಿ ರಾಮಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದ ಭರವಸೆಯನ್ನು ಈಡೇರಿಸುವ ಮೂಲಕ ದೇಶದಲ್ಲಿ ಗ್ಯಾರಂಟಿ ರಾಮಯ್ಯನೆಂದು ಹೆಸರು ಪಡೆದುಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾರಿ ನ್ಯಾಯವನ್ನು ಅನುಷ್ಠಾನ ಮಾಡುತ್ತೇವೆ ಎಂದರು.
ಮೋದಿ ಗ್ಯಾರಂಟಿ ಮಹಾ ಸುಳ್ಳು: ಕರ್ನಾಟಕದ ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿದ್ದ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯನ್ನು ಕಾಪಿ ಮಾಡಿದ್ದಾರೆ. ಮತ್ತೊಮ್ಮೆ ಅಧಿಕಾರ ಕೊಟ್ಟರೆ ಗ್ಯಾರಂಟಿ ಕೊಡುವುದಾಗಿ ಆಶ್ವಾಸನೆ ಕೊಡುತ್ತಿದ್ದಾರೆ. 10 ವರ್ಷಗಳಿಂದ ಅಧಿಕಾರದಲ್ಲಿದ್ದು ಕೊಟ್ಟ ಭರವಸೆ ಈಡೇರಿಸಲಾಗದೇ ಈಗ ಮತ್ತೊಮ್ಮೆ ಅವಕಾಶ ಕೇಳುತ್ತಿದ್ದಾರೆ. ನಾಚಿಕೆಯಾಗುವುದಿಲ್ಲವೇ? ಎಂದು ಟೀಕಿಸಿದರು.
2013ರಲ್ಲಿ ಅಧಿಕಾರಕ್ಕೆ ಬಂದ 60 ದಿನಗಳಲ್ಲಿ ಮಹಿಳಾ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿದ್ದರು. 10 ವರ್ಷಗಳು ಬೇಕಾಯಿತು. ಅಗತ್ಯ ವಸ್ತುಗಳು, ಅಡುಗೆ ಅನಿಲದ ಬೇಲೆ ಯಾಕೇ ದ್ವಿಗುಣವಾಯಿತು. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಕಪ್ಪು ಹಣ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಯಾಕೇ ಮಾಡಲಿಲ್ಲ? ಪೆಟ್ರೋಲ್, ಡಿಸೇಲ್ ಬೆಲೆ ಯಾಕೇ ದುಪ್ಪಟ್ಟಾಯಿತು? ಬಿಜೆಪಿಯವರು ಉತ್ತರ ಕೊಡಬೇಕು. ಈಗ ಮೋದಿ ಕಾ ಗ್ಯಾರಂಟಿ ಅಪ್ಪಟ ಸುಳ್ಳು ಮತ್ತು ಚುನಾವಣೆಯ ಗಿಮಿಕ್. ಇದನ್ನು ಜನರು ನಂಬಬಾರದು ಎಂದರು.
10 ವರ್ಷಗಳ ಆಡಳಿತದಲ್ಲಿ ಒಮ್ಮೆಯೂ ಪ್ರಧಾನಿ ಮೋದಿ ಪತ್ರಿಕಾಗೋಷ್ಠಿ ನಡೆಸಲಿಲ್ಲ. ಪ್ರಶ್ನೆಗಳನ್ನು ಎದುರಿಸಲಾಗದೇ ಮನ್ ಕಿ ಬಾತ್ ನಲ್ಲಿ ಮಾತಾಡುತ್ತಿದ್ದಾರೆ. ಚುನಾವಣಾ ಬಾಂಡ್ ಹಗರಣ ಬೆಳಕಿಗೆ ಬಂದಿದೆ. ಯಾರು ಉತ್ತರಿಸಬೇಕು? ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ನ್ಯಾಯಯುತ ತೆರಿಗೆ ಹಣ ಕೊಡದೇ ಮಹಾಮೋಸ ಮಾಡಲಾಗುತ್ತಿದೆ. ಕರ್ನಾಟಕದ ಹಣವನ್ನು ಬೇರೆ ರಾಜ್ಯಗಳಿಗೆ ಹಂಚುತ್ತಿದ್ದಾರೆ. ಹಾಗಾಗಿ ಕರ್ನಾಟಕದ ಜನತೆ ಬಿಜೆಪಿ ನಾಯಕರ ಆಶ್ವಾಸನೆಯನ್ನು ನಂಬಬಾರದು ಎಂದರು.
ಕರ್ನಾಟಕದಲ್ಲಿ ನುಡಿದಂತೆ ನಡೆದಿದ್ದೇವೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನುಡಿದಂತೆ ನಡೆಯಲಿದ್ದೇವೆ. ಕೇಂದ್ರದ ವಿರುದ್ಧ ದನಿ ಎತ್ತದ ಸಂಸದರಿಂದ ಜೀವನ ಕತ್ತಲೆಯಲ್ಲಿದೆ. ಭವಿಷ್ಯ ಕಾಣುತ್ತಿಲ್ಲ. ನೆಮ್ಮದಿ ಇಲ್ಲವಾಗಿದೆ. ಸಂವಿಧಾನ ರಕ್ಷಿಸಬೇಕಿದೆ. ಈ ಎಲ್ಲ ಕಾರಣಕ್ಕೆ ಕಾಂಗ್ರೆಸ್ ಗೆ ಆಶೀರ್ವಾದ ಮಾಡುವಂತೆ ಕೇಳುತ್ತಿದ್ದೇನೆ ಎಂದು ತಿಳಿಸಿದರು.
ಬಡವರಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ. ನೆಹರೂ ಸರ್ಕಾರದಿಂದ ಮನಮೋಹನ್ ಸಿಂಗ್ ವರೆಗೆ ಎಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ? ಬಿಜೆಪಿ ಬಡವರ ಪರವಾಗಿ ಒಂದೇ ಒಂದೂ ಕಾರ್ಯಕ್ರಮ ರೂಪಿಸಿದೆಯೇ? ಯಾವ ಕೆಲಸ ಮಾಡದಿದ್ದರೂ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಡಾ.ಪುಷ್ಪಾ ಅಮರನಾಥ್ ಉತ್ತರಿಸಿದರು.
ಮಾಜಿ ಮಹಾಪೌರರಾದ ಪುಷ್ಪಾಲತಾ ಚಿಕ್ಕಣ್ಣ, ಮೋದಾಮಣಿ ಮೇಯರ್ ಉಪ ಮೇಯರ್ ಪುಷ್ಪವಲ್ಲಿ, ಮುಖಂಡರಾದ ರಾಧಾಮಣಿ, ಡಾ.ಸುಜಾತಾರಾವ್, ಲತಾ ಮೋಹನ್, ಭವ್. ಚಂದ್ರಕಲಾ. ಇಂದ್ರ. ಸುಶೀಲಾ ಮರಿಗೌಡ ಇದ್ದರು.