ಹ್ಯಾಮಿಲ್ಟನ್: ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತಕ್ಕೆ 261 ರನ್ ಗಳ ಗುರಿಯನ್ನು ನ್ಯೂಜಿಲೆಂಡ್ ಮಹಿಳಾ ತಂಡ ನೀಡಿದೆ.
ವಿಶ್ವಕಪ್ ಜಯಿಸುವ ಕನಸು ಕಾಣುತ್ತಿರುವ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡವು ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಸೋಫಿ ಡಿವೈನ್ ಜೊತೆ ಇನಿಂಗ್ಸ್ ಆರಂಭಿಸಿದ ಸೂಝಿ ಬೇಟ್ಸ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಈ ವೇಳೆ ಜೊತೆಯಾದ ಸೋಫಿ (35) ಹಾಗೂ ಅಮೇಲಿಯಾ ಕೆರ್ 2ನೇ ವಿಕೆಟ್‌ಗೆ 45 ರನ್ ಕೂಡಿಸಿ ಚೇತರಿಕೆ ನೀಡಿದರು.
ನಾಯಕಿ ಔಟಾದ ಬಳಿಕ ಎಮಿ ಸೆಟರ್ಥ್‌ವೇಟ್ ಜೊತೆಗೂಡಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಕೆರ್ (50), ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 6ನೇ ಅರ್ಧಶತಕ ಗಳಿಸಿದರು. ಮತ್ತೊಂದು ತುದಿಯಲ್ಲಿ ಸೊಗಸಾದ ಇನಿಂಗ್ಸ್ ಕಟ್ಟಿದ ಎಮಿ (75), 27ನೇ ಅರ್ಧಶತಕ ಸಿಡಿಸಿದರು. ಇದರಿಂದಾಗಿ ನ್ಯೂಜಿಲೆಂಡ್ ಪಡೆ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 260 ರನ್ ಗಳಿಸಲು ಸಾಧ್ಯವಾಯಿತು.
ಭಾರತ ಪರ ಪೂಜಾ ವಸ್ತ್ರಾಕರ್ 4 ವಿಕೆಟ್ ಕಬಳಿಸಿದರೆ, ಕನ್ನಡತಿ ರಾಜೇಶ್ವರಿ ಗಾಯಕವಾಡ್ 2, ಜೂಲನ್ ಗೋಸ್ವಾಮಿ ಮತ್ತು ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಸವಾಲಿನ ಗುರಿ ಬೆನ್ನತ್ತಿರುವ ಭಾರತ ತಂಡ ಮೊತ್ತ 50 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಅನುಭವಿಗಳಾದ ಸ್ಮೃತಿ ಮಂದಾನ (6) ಮತ್ತು ದೀಪ್ತಿ ಶರ್ಮಾ (5) ಎರಡಂಕಿ ಮೊತ್ತವನ್ನೂ ಗಳಿಸದೆ ಪೆವಿಲಿಯನ್ ಸೇರಿಕೊಂಡರು. ಆರಂಭಿಕ ಬ್ಯಾಟರ್ ಯಸಿಕಾ ಭಾಟಿಯಾ 28 ರನ್ ಗಳಿಸಿದ್ದಾಗ ವಿಕೆಟ್ ಕೈ ಚೆಲ್ಲಿದ್ದಾರೆ.ಸದ್ಯ ನಾಯಕಿ ಮಿಥಾಲಿ (7) ಮತ್ತು ಇನ್ನೂ ಖಾತೆ ತೆರೆಯದ ಹರ್ಮನ್‌ಪ್ರೀತ್ ಕೌರ್ ಕ್ರೀಸ್‌ನಲ್ಲಿದ್ದಾರೆ. ತಂಡದ ಮೊತ್ತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 50 ರನ್ ಆಗಿದೆ.ಭಾರತ ತಂಡ ಪಂದ್ಯ ಗೆಲ್ಲಲು 180 ಎಸೆತಗಳಲ್ಲಿ ಇನ್ನೂ 211 ರನ್ ಗಳಿಸಬೇಕಿದೆ.