ಬೆಂಗಳೂರು: ಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ನಾವು, ರಾಜ್ಯ-ದೇಶ ಮೊದಲು ಎಂಬ ನಿಷ್ಠೆ ಇಟ್ಟುಕೊಂಡು ದುಡಿಯಬೇಕು ಎಂದು ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ ಇಂಜಿನಿಯರ್‌ಗಳಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಕಿವಿಮಾತು ಹೇಳಿದ್ದಾರೆ.
ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್‌ನ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ 400 ಸಹಾಯಕ ಇಂಜಿನಿಯರ್‌ಗಳ 3 ದಿನಗಳ ಕಾರ್ಯಾನುಭವ ತರಬೇತಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, “ಇಂಧನ ಇಲಾಖೆಯ ಸಿಬ್ಬಂದಿ ನಿತ್ಯ ಜನರೊಂದಿಗೆ ವ್ಯವಹರಿಸಬೇಕಾಗುತ್ತದೆ. ಗ್ರಾಹಕರಿಗೆ ಯಾವುದೇ ಕುಂದು ಕೊರತೆಯಾಗದಂತೆ ಉತ್ತಮ ಸೇವೆ ಒದಗಿಸಬೇಕು. ಜನರ ತೆರಿಗೆ ಹಣದಲ್ಲಿ ನಾನು ಸೇರಿದಂತೆ ಸರ್ಕಾರದ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲರೂ ಸಂಬಳ ಪಡೆಯುತ್ತೇವೆ. ಹಾಗಾಗಿ ರಾಜ್ಯ, ದೇಶದ ಹಿತದೃಷ್ಠಿಗೆ ಧಕ್ಕೆಯಾಗದಂತೆ ನಿಷ್ಠೆಯಿಂದ ಕೆಲಸ ಮಾಡಬೇಕು,”ಎಂದು ಸಲಹೆ ನೀಡಿದರು.
“ನೇಮಕಾತಿ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಳ ನಿರಂತರ ಪ್ರಯತ್ನದಿಂದ 6 ತಿಂಗಳೊಳಗೆ ನೇಮಕ ಆದೇಶ ನೀಡಲಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಒಳಗೆ ಆದೇಶ ಪತ್ರ ನೀಡಲಾಗಿದೆ. ಈಗ ನಿಷ್ಠೆಯಿಂದ ಕೆಲಸ ಮಾಡುವ ಜವಾಬ್ದಾರಿ ಅವರ ಮೇಲಿದೆ. ವಿದ್ಯುತ್ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಅವರು ತಮ್ಮ ಜ್ಞಾನ ಬಳಸಬೇಕಿದೆ,” ಎಂದು ಅವರು ಹೇಳಿದರು.
“ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಎಲ್ಲ ಇಂಜಿನಿಯರ್‌ಗಳು ಹೆಜ್ಜೆ ಹಾಕಬೇಕು. ದೇಶಕ್ಕೆ ಹೆಮ್ಮೆಯಾಗಿರುವ ಅವರ ಹೆಸರನ್ನು ಉಳಿಸಿಕೊಂಡುವ ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ನಿಮ್ಮ ಇಂಜಿನಿಯರಿಂಗ್ ಕೌಶಲ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿರಬೇಕು. ಅದಕ್ಕಾಗಿ ನಮ್ಮ ಇಲಾಖೆಯ ಇಂಜಿನಿಯರ್‌ಗಳನ್ನು ಬೇರೆ ರಾಜ್ಯ ಹಾಗೂ ದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು,”
– ಪಂಕಜ್ ಕುಮಾರ್ ಪಾಂಡೆ, ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್
“ಕಳೆದ ವಾರವಷ್ಟೇ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಆಚರಿಸಿದ್ದೇವೆ. ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಪರಿಹಾರ ಕೊಡಬಹುದು. ಆದರೆ, ಅಂಥ ಪರಿಸ್ಥಿತಿಯೇ ಬಾರದಿರಲಿ ಎಂದು ಪ್ರಾರ್ಥಿಸುತ್ತೇನೆ. ಇಲಾಖೆಯ ಇಂಜಿನಿಯರ್‌ಗಳ ಪ್ರಾಣ ನಮಗೆ ಅತ್ಯಮೂಲ್ಯ. ವಿದ್ಯುತ್ ಪೂರೈಕೆ, ನಿರ್ವಹಣೆ ವೇಳೆ ಅತ್ಯಂತ ಜಾಗರೂಕರಾಗಿರಬೇಕು. ಅದಕ್ಕಾಗಿ ತರಬೇತಿ ಕೊಡಲಾಗುತ್ತದೆ. ಎಲ್ಲರೂ ಸುರಕ್ಷತೆ ಬಗ್ಗೆ ಲಕ್ಷ್ಯ ಕೊಡಿ,”ಎಂದು ಸಚಿವರು ಮನವಿ ಮಾಡಿದರು.
“ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ದೇಶ ನಮ್ಮದು. ನಮ್ಮ ರಾಜ್ಯದ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ, ಆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ತರಬೇತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ,”ಎಂದು ಜಾರ್ಜ್ ಹೇಳಿದರು.
ಕಾರ್ಯಕ್ರಮದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯಕಾರ್ಯರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕೆಇಬಿ ಇಂಜಿನಿಯರ್ಸ್ ಅಸೋಸಿಷಯನ್‌ನ ಬಸವರಾಜು, ಸುಧಾರಕರ್ ರೆಡ್ಡಿ ಶಿವಣ್ಣ ಉಪಸ್ಥಿತರಿದ್ದರು.