ಮನೆ ರಾಜ್ಯ ‘ತುಮಕೂರಿಗೆ ತೊಂದರೆ ಆಗಲ್ಲ ಅಂದಮೇಲೆ ಕೆಲಸ ಶುರು ಮಾಡಿದ್ದು’: ಹೇಮಾವತಿ ಕೆನಾಲ್ ವಿವಾದ : ಗೃಹ...

‘ತುಮಕೂರಿಗೆ ತೊಂದರೆ ಆಗಲ್ಲ ಅಂದಮೇಲೆ ಕೆಲಸ ಶುರು ಮಾಡಿದ್ದು’: ಹೇಮಾವತಿ ಕೆನಾಲ್ ವಿವಾದ : ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

0

ಬೆಂಗಳೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯ ಕುರಿತು ಚರ್ಚೆ ಮತ್ತು ವಿವಾದಗಳ ನಡುವೆ ಗೃಹ ಸಚಿವ ಜಿ. ಪರಮೇಶ್ವರ್ ನಿಖರ ಸ್ಪಷ್ಟನೆ ನೀಡಿದ್ದಾರೆ. “ತುಮಕೂರಿಗೆ ಯಾವುದೇ ರೀತಿಯ ನೀರಿನ ತೊಂದರೆ ಆಗಲ್ಲ ಎಂಬುದಾಗಿ ತಾಂತ್ರಿಕ ಸಮಿತಿಯ ವರದಿ ಬಂದ ಬಳಿಕವೇ ಕಾಮಗಾರಿಗೆ ಚಾಲನೆ ನೀಡಲಾಗಿದೆ” ಎಂದು ಅವರು ಸ್ಪಷ್ಟೀಕರಿಸಿದರು.

ತುಮಕೂರು ಜಿಲ್ಲೆಯ ಹಲವಾರು ಭಾಗಗಳಲ್ಲಿ ಹೇಮಾವತಿ ಕೆನಾಲ್ ಯೋಜನೆ ವಿರೋಧಿಸಿ ಸಾರ್ವಜನಿಕರು ಮತ್ತು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ, ಸಚಿವರು ತುಮಕೂರು ಎಸ್‌ಪಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಈ ಯೋಜನೆ ಆರಂಭಕ್ಕೂ ಮುನ್ನ ತಾಂತ್ರಿಕ ಸಮಿತಿಯು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಿತ್ತು. ವರದಿಯು ‘ತುಮಕೂರಿಗೆ ತೊಂದರೆ ಆಗದು’ ಎಂದು ನಿಶ್ಚಯಪೂರ್ವಕವಾಗಿ ತಿಳಿಸಿದೆ” ಎಂದು ವಿವರಿಸಿದರು.

“ಈ ಸಮಿತಿ ರಚನೆಯಾಗುವಾಗ ಮತ್ತು ವರದಿ ಬಂದಾಗ, ಬಿಜೆಪಿಯ ಹಲವಾರು ಶಾಸಕರು, ತಾಂತ್ರಿಕ ಸಭೆಯಲ್ಲಿ ಉಪಸ್ಥಿತರಿದ್ದರು. ಅವರು ಕೂಡ ಆ ವರದಿಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈಗ, ರಾಜಕೀಯ ಲಾಭಕ್ಕಾಗಿ, ಅದರ ವಿರುದ್ಧ ಮಾತಾಡುತ್ತಿದ್ದಾರೆ.”

ಅವರು ಮುಂದುವರೆದು, ತುಮಕೂರಿನಿಂದ ರಾಮನಗರಕ್ಕೆ ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ 1000 ಕೋಟಿ ರೂ. ಹಣವನ್ನು ಯೋಜನೆಗೆ ಕೊಟ್ಟಿದ್ದೇವೆ, ಹಣ ಕೂಡ ಬಿಡುಗಡೆ ಆಗಿತ್ತು ಎಂದು ಹೇಳಿದರು. “ಈ ಕಾಮಗಾರಿ ನಡೆಯುತ್ತಿರುವುದೂ ಇದೇ ಆಧಾರದ ಮೇಲೆ. ಈ ಬಗ್ಗೆ ಆಳವಾಗಿ ಚರ್ಚಿಸಿ ನಿರ್ಧಾರಕ್ಕೆ ಬಂದಿದ್ದೇವೆ. ಸರ್ಕಾರ ಯಾರಿಗೂ ನಷ್ಟವಾಗುವಂತೆ ಯೋಜನೆ ಮಾಡುವುದಿಲ್ಲ” ಎಂದರು.

ಸಚಿವರ ಹೇಳಿಕೆಯ ಪ್ರಕಾರ, ತಾಂತ್ರಿಕ ಸಮಿತಿಯು ವ್ಯವಸಾಯ, ನೀರಿನ ಹಕ್ಕು, ಮತ್ತು ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳನ್ನು ಅಧ್ಯಯನ ಮಾಡಿ, ನಂತರ ಸಂಪೂರ್ಣ ಮಾಹಿತಿ ಆಧಾರಿತ ವರದಿಯನ್ನು ನೀಡಿತ್ತು. “ಅದರ ಪ್ರಕಾರ, ತುಮಕೂರು ಜಿಲ್ಲೆಗೆ ಹೇಮಾವತಿ ಕೆನಾಲ್ ಯೋಜನೆಯಿಂದ ಯಾವುದೇ ರೀತಿಯ ನೀರಿನ ತೊಂದರೆ ಆಗುವುದಿಲ್ಲ. ತಂತ್ರಜ್ಞರು ಈ ಬಗ್ಗೆ ಖಚಿತ ಪಡಿಸಿದ್ದಾರೆ” ಎಂದು ಅವರು ತಿಳಿಸಿದರು.

ಈಗ ಬಿಜೆಪಿ ಶಾಸಕರು ಅಲ್ಲಿ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇವತ್ತಿನ ಪ್ರತಿಭಟನೆ ಬಗ್ಗೆ ವರದಿ ಪಡೆಯುತ್ತೇನೆ. ನಂತರ ಮಾತಾಡುತ್ತೇನೆ ಎಂದರು.