ಮೈಸೂರು: ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಿ, ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ ಎಂದು ಭಾರತೀಯ ಚುನಾವಣಾ ಆಯೋಗದ ನಿರ್ದೇಶಕರಾದ ಶುಭ್ರ ಸೆಕ್ಸೆನಾ ತಿಳಿಸಿದರು.
ಇಂದು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಚುನಾವಣಾ ಪೂರ್ವ ಸಿದ್ಧತೆಗಳ ಕುರಿತು ಮೈಸೂರು ವಿಭಾಗದ 8 ಜಿಲ್ಲೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊದಲಿಗೆ ವನ್ನ ರೆಬಲ್ ಹಾಗೂ ಕ್ರಿಟಿಕಲ್ ಪೋಲಿಂಗ್ ಸ್ಟೇಷನ್’ಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ನಿಯಮದಡಿ ಅವುಗಳನ್ನು ಗುರುತಿಸುತ್ತೀರಿ ಎಂಬುದರ ಬಗ್ಗೆ ಮಾಹಿತಿ ಪಡೆದು ನಂತರ ಅವುಗಳನ್ನು ಭಾರತೀಯ ಚುನಾವಣಾ ಆಯೋಗ ನೀಡಿರುವ ಸೂಚನೆ ಹಾಗೂ ನಿರ್ದೇಶನಗಳನ್ವಯ ಗುರುತಿಸಿ, ಪ್ರತಿಯೊಂದು ಮತಗಟ್ಟೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿಯವರು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಮತದಾನದ ವೇಳೆ ಮತಗಟ್ಟೆಯಲ್ಲಿರುವ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ರೂಪಿಸಿಕೊಂಡಿರುವ ಯೋಜನೆಗಳನ್ನು ಪರಿಶೀಲಿಸಿದ ಅವರು ಚುನಾವಣೆ ಘೋಷಣೆಯಾದ ಮೇಲೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪರಾಧಗಳು ನಡೆದರು ಅದು ಚುನಾವಣಾ ಸಂಬಂಧಿತ ಅಪರಾಧಗಳ ಪಟ್ಟಿಗೆ ಸೇರುತ್ತದೆ ಎಂದು ತಿಳಿಸಿದರು.
2018ರ ವಿಧಾನಸಭಾ ಚುನಾವಣೆ ಮತ್ತು 2019 ರ ಲೋಕಸಭಾ ಚುನಾವಣಾ ಸಂಬಂಧಿತ ಅಪರಾಧಗಳ ಬಗ್ಗೆ ಜಿಲ್ಲಾವಾರು ಅಂಕಿಅಂಶಗಳ ಬಗ್ಗೆ ಮಾಹಿತಿ ಪಡೆದರು.
ಚುನಾವಣಾ ಸಂಬಂಧಿತ ಅಪರಾಧಗಳ ಬಗ್ಗೆ ಆಳವಾಗಿ ಪರಿಶೀಲನೆ ನಡೆಸಬೇಕು ಇಲ್ಲದಿದ್ದರೆ ಸಂದರ್ಭದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುವುದಿಲ್ಲ. ಇಂತಹ ಅಪರಾಧಗಳು ಮುಂದಿನ ಚುನಾವಣೆಯ ಮೇಲೂ ಪ್ರಭಾವ ಬೀರುತ್ತವೆ ಎಂದರು.
ಮತದಾರರ ಅಂತಿಮ ಪಟ್ಟಿ ಪ್ರಕಟವಾಗಿದ್ದು ಹೆಸರು ಇದೆಯೇ, ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಇದರ ಬಗ್ಗೆ ದೂರುಗಳು ಬಂದರೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದರು.
ಆದಿವಾಸಿಗಳು ಚುನಾವಣಾ ಪ್ರಕ್ರಿಯೆಯಿಂದ ಬಿಟ್ಟು ಹೋಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಂಡು ಅವರ ಮತದಾರರ ನೋಂದಣಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಭಾರತೀಯ ಚುನಾವಣಾ ಆಯೋಗದ ಕಾರ್ಯ ನಿರ್ವಹಣಾಧಿಕಾರಿಗಳಾದ ಬಿ.ಸಿ. ಪಾತ್ರ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ. ಜಿಸಿ ಪ್ರಕಾಶ್, ಮೈಸೂರು ವಿಭಾಗದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ ರೆಡ್ಡಿ , ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ , ಚುನಾವಣಾ ತಹಶೀಲ್ದಾರ್ ರಾಮ್ ಪ್ರಸಾದ್ ಹಾಗೂ ರಿಟರ್ನಿಂಗ್ ಆಫೀಸರ್ ಗಳು ಉಪಸ್ಥಿತರಿದ್ದರು.