ಬೆಂಗಳೂರು: ದೇಶದ ಸ್ವತಂತ್ರ ಚಳುವಳಿಯಿಂದ ಹಿಡಿದು ಇಂದಿನ ರಾಜಕೀಯ ಚಳುವಳಿಯ ವರೆಗೂ ಕಾಂಗ್ರೆಸ್ ಪಕ್ಷ ಬೃಹತ್ತಾಗಿ ಬೆಳೆದು ನೆಲೆ ನಿಲ್ಲಲು ಕಾರ್ಯಕರ್ತರೇ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿಯ ‘ಕಾಂಗ್ರೆಸ್ ಭವನ’ ದಲ್ಲಿ ಇಂದು ಪಕ್ಷದ ಕಾರ್ಯಕರ್ತರ, ಮುಖಂಡರ ಹಾಗೂ ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಮಾತನಾಡಿದರು.
ಸುಳ್ಳು ಭರವಸೆ ಮತ್ತು ಆಪರೇಶನ ಕಮಲದಂತಹ ಅನೈತಿಕ ಮಾರ್ಗದಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ, ನೇರವಾಗಿ ಚುನಾವಣೆಯಲ್ಲಿ ಗೆಲ್ಲುವ ಶಕ್ತಿ ಹೊಂದಿಲ್ಲ. ಹೀಗಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ವಿವಿಧ ಪಕ್ಷಗಳಲ್ಲಿನ ರಾಜಕೀಯ ನೇತಾರರಿಗೆ ಆಮಿಷ ನೀಡಿ ಪಕ್ಷಕ್ಕೆ ಬರಮಾಡಿಕೊಂಡು ಅವರ ಹೆಸರಿನ ಮೇಲೆ ರಾಜಕೀಯ ಮಾಡಲಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆ, ಬಿಜೆಪಿ ಪಕ್ಷದ ಜನವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸರಿಯಾಗಿ ಮಾಡಿದ್ದೇ ಆದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ ಪಕ್ಷ ನಿರೀಕ್ಷಿತ ಗೆಲುವು ಸಾಧಿಸಲಿದೆ ಎಂದು ಸಚಿವರಾದ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.
ಈ ಸಂಧರ್ಭದಲ್ಲಿ ಕೆ.ಪಿ.ಸಿ.ಸಿ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಮುಖಂಡರು ಸಲ್ಲಿಸಿದ ಅಹವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಸಚಿವರು ತಿಳಿಸಿದ್ದಾರೆ.