ಮನೆ ಕ್ರೀಡೆ ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ 69 ರನ್’ಗಳ ಭರ್ಜರಿ ಜಯ

ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ 69 ರನ್’ಗಳ ಭರ್ಜರಿ ಜಯ

0

ನವದೆಹಲಿ: ಇಂಗ್ಲೆಂಡ್ ತಂಡವು ಅಫ್ಘಾನಿಸ್ತಾನದ ಬಿಗು ಬೌಲಿಂಗ್ ಮುಂದೆ ತತ್ತರಿಸಿತು. ರಶೀದ್ ಖಾನ್, ಮುಜೀಬ್ ಉರ್ ರಹಮಾನ್ ಮತ್ತು ಮೊಹಮ್ಮದ್ ನಬಿ ಅವರ ದಾಳಿಗೆ ಕ್ರಿಕೆಟ್ ಜನಕರ ನಾಡಿನ ಬ್ಯಾಟರ್ ಗಳು ತರಗಲೆಗಳಂತೆ ಉದುರಿದರು. ಅಫ್ಘಾನಿಸ್ತಾನ ತಂಡ ಆಂಗ್ಲರನ್ನು 69 ರನ್ನಿಂದ ಮಣಿಸಿ ಇತಿಹಾಸ ನಿರ್ಮಿಸಿತು.

Join Our Whatsapp Group

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ್ 49.5 ಓವರ್ ಗಳಲ್ಲಿ 284 ರನ್ ಗಳಿಸಿ ಆಲೌಟ್ ಆದರು.

285 ರನ್ ಗಳ ಸ್ಪರ್ಧಾತ್ಮಕ ಗುರಿ ಪಡೆದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಅಫ್ಘಾನ್ ಬೌಲರ್ ಗಳು ಯಶಸ್ವಿಯಾದರು. 2ನೇ ಓವರ್ ನ ಮೊದಲ ಎಸೆತದಲ್ಲೇ ಜಾನಿ ಬೈರ್ಸ್ಟೋವ್ (2) ಔಟಾದರೆ, 7ನೇ ಓವರ್ ನಲ್ಲಿ ಜೋ ರೂಟ್ (11) ವಿಕೆಟ್ ಒಪ್ಪಿಸಿದರು. ಇನ್ನು 33 ರನ್ ಬಾರಿಸಿ ಡೇವಿಡ್ ಮಲಾನ್ ಕೂಡ ನಿರ್ಗಮಿಸಿದರು.

ಜೋಸ್ ಬಟ್ಲರ್ (9) ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ (10) ಬಂದ ವೇಗದಲ್ಲೇ ಹಿಂತಿರುಗಿದರು. ಪರಿಣಾಮ 117 ರನ್ ಗಳಿಸುವಷ್ಟರಲ್ಲಿ ಇಂಗ್ಲೆಂಡ್ ತಂಡವು ಅಗ್ರ ಕ್ರಮಾಂಕದ ಐವರ ವಿಕೆಟ್ ಕಳೆದುಕೊಂಡಿತು.

ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಹ್ಯಾರಿ ಬ್ರೂಕ್ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಮತ್ತೊಂದೆಡೆ ಸ್ಯಾಮ್ ಕರನ್ (10) ಹಾಗೂ ಕ್ರಿಸ್ ವೋಕ್ಸ್ (9) ಅವರನ್ನು ಕ್ರೀಸ್ ಕಚ್ಚಿ ನಿಲ್ಲಲು ಮೊಹಮ್ಮದ್ ನಬಿ ಹಾಗೂ ಮುಜೀಬ್ ಬಿಡಲಿಲ್ಲ. ಹ್ಯಾರಿ ಬ್ರೂಕ್ (66) ವಿಕೆಟ್ ಪಡೆದ ಮುಜೀಬ್ ಉರ್ ರೆಹಮಾನ್ ಅಫ್ಘಾನ್ ತಂಡಕ್ಕೆ ಅಮೂಲ್ಯ ಯಶಸ್ಸು ತಂದುಕೊಟ್ಟರು . 35 ಓವರ್ ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡ 173 ರನ್ ಕಲೆಹಾಕಿದರೆ, ಅಫ್ಘಾನ್ ಬೌಲರ್ ಗಳು 8 ವಿಕೆಟ್ ಗಳನ್ನು ಉರುಳಿಸಿದ್ದರು.

ಅಂತಿಮವಾಗಿ ಇಂಗ್ಲೆಂಡ್ ತಂಡವನ್ನು 40.3 ಓವರ್ ಗಳಲ್ಲಿ 215 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಅಫ್ಘಾನಿಸ್ತಾನ್ ತಂಡ 69 ರನ್ ಗಳ ಭರ್ಜರಿ ಜಯ ಸಾಧಿಸಿತು.