ಮನೆ ಕ್ರೀಡೆ ವಿಶ್ವಕಪ್ ಫುಟ್‌’ಬಾಲ್ ಟೂರ್ನಿ: ಸ್ಮರಣೀಯ ಗೆಲುವು ದಾಖಲಿಸಿದ ಕ್ಯಾಮರೂನ್

ವಿಶ್ವಕಪ್ ಫುಟ್‌’ಬಾಲ್ ಟೂರ್ನಿ: ಸ್ಮರಣೀಯ ಗೆಲುವು ದಾಖಲಿಸಿದ ಕ್ಯಾಮರೂನ್

0

ದೋಹಾ: ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಿಂದ ಹೊರಬೀಳುವ ಮುನ್ನ ಸ್ಮರಣೀಯ ಗೆಲುವು ದಾಖಲಿಸಿದ ಹಿರಿಮೆ ಕ್ಯಾಮರೂನ್ ತಂಡದ್ದಾಯಿತು.

ವಿನ್ಸೆಂಟ್‌ ಅಬೂಬಕ್ಕರ್ ಗಳಿಸಿದ ಗೋಲಿನ ಬಲದಿಂದ ಬ್ರೆಜಿಲ್ ತಂಡವನ್ನು 1–0ಯಿಂದ ಪರಾಭವಗೊಳಿಸಿದ ಕ್ಯಾಮರೂನ್‌, ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಆಫ್ರಿಕಾದ ಮೊದಲ ತಂಡ ಎನಿಸಿಕೊಂಡಿತು.

ಲುಸೈಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿ ಗುಂಪಿನ ಹಣಾಹಣಿಯಲ್ಲಿ ಸೋತರೂ ಬ್ರೆಜಿಲ್ ತಂಡವು ಈಗಾಗಲೇ 16ರ ಘಟ್ಟಕ್ಕೆ ಅರ್ಹತೆ ಗಳಿಸಿದ್ದರಿಂದ ಫಲಿತಾಂಶ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡವು 3–2ರಿಂದ ಸರ್ಬಿಯಾ ತಂಡವನ್ನು ಮಣಿಸಿ, ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಪ್ರೀಕ್ವಾರ್ಟರ್‌ ಟಿಕೆಟ್‌ ಪಡೆಯಿತು.ಈ ಗುಂಪಿನಲ್ಲಿ ಬ್ರೆಜಿಲ್ ಅಗ್ರಸ್ಥಾನ ಗಳಿಸಿತು.

ರೆಡ್‌ ಕಾರ್ಡ್‌ ಪಡೆದ ಅಬೂಬಕ್ಕರ್‌: ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ನಿಗದಿತ ಅವಧಿಯವರೆಗೆ ಯಾವುದೇ ಗೋಲು ದಾಖಲಾಗಲಿಲ್ಲ. ಇಂಜುರಿ ಅವಧಿಯಲ್ಲಿ (92ನೇ ನಿಮಿಷ) ಸಬ್‌’ಸ್ಟಿಟ್ಯೂಟ್‌ ಆಟಗಾರ ಜೆರೋಮ್‌ ಎನ್‌’ಗೊಮ್‌ ಎಂಬೆಕೆಲಿ ನೀಡಿದ ಕ್ರಾಸ್‌’ನಲ್ಲಿ ವಿನ್ಸೆಂಟ್‌ ಅಬೂಬಕ್ಕರ್ ಚೆಂದದ ಹೆಡರ್‌ ಮಾಡಿದರು.

ಚೆಂಡು ಗೋಲುಪೋಸ್ಟ್‌’ನೊಳಗೆ ಸೇರುತ್ತಿದ್ದಂತೆ ಕ್ಯಾಮರೂನ್‌ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಈ ವೇಳೆ ಅಂಗಣದಿಂದ ಹೊರಗೋಡಿ ಜೆರ್ಸಿ ಕಳಚಿ ಸಂಭ್ರಮಿಸಿ ವಾಪಸ್‌ ಬಂದ ಅಬೂಬಕ್ಕರ್‌ ಅವರಿಗೆ ರೆಫರಿ ರೆಡ್‌ಕಾರ್ಡ್ ನೀಡಿದರು.

ಇದೇ ಪಂದ್ಯದಲ್ಲಿ ಬ್ರೆಜಿಲ್‌ ಆಟಗಾರನನ್ನು ಬೀಳಿಸಿ ಒರಟು ಆಟವಾಡಿದ್ದ ಅಬೂಬಕ್ಕರ್ ಅವರಿಗೆ ಹಳದಿ ಕಾರ್ಡ್‌ ನೀಡಿದ್ದ ರೆಫರಿ ಇಸ್ಮಾಯಿಲ್ ಎಲ್‌ಫಾತ್‌ ಅವರು ಎಚ್ಚರಿಕೆ ನೀಡಿದ್ದರು.ರೆಡ್‌ ಕಾರ್ಡ್‌ ನೀಡುವ ಮೊದಲು ಇಸ್ಮಾಯಿಲ್‌ ಅವರು ಅಬೂಬಕ್ಕರ್ ಅವರ ಕೈಕುಲುಕಿ ಮಂದಹಾಸ ಬೀರಿದರು.

1998ರ ಬಳಿಕ ಗುಂಪು ಹಂತದಲ್ಲಿ ಬ್ರೆಜಿಲ್ ಸೋತಿದ್ದು ಇದೇ ಮೊದಲು. ಆ ವರ್ಷ ನಾರ್ವೆ ತಂಡಕ್ಕೆ ಮಣಿದಿತ್ತು. ಈ ಪಂದ್ಯದಲ್ಲಿ ಬ್ರೆಜಿಲ್ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿತ್ತು. ಪಾದದ ಗಾಯದಿಂದ ಬಳಲುತ್ತಿರುವ ನೇಮರ್ ಕೂಡ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.ಈ ಪಂದ್ಯದಲ್ಲಿ 21 ವರ್ಷದ ಆಟಗಾರ ಗ್ಯಾಬ್ರಿಯಲ್ ಮಾರ್ಟಿನೆಲಿ ಬ್ರೆಜಿಲ್‌ ತಂಡದ ಪರ ಗಮನಸೆಳೆದರು. ಎರಡ್ಮೂರು ಅವಕಾಶಗಳಲ್ಲಿ ಗೋಲು ಗಳಿಕೆಯನ್ನು ತಪ್ಪಿಸಿಕೊಂಡರು.

ಬ್ರೆಜಿಲ್ ತಂಡವು 16ರ ಘಟ್ಟದಲ್ಲಿ ದಕ್ಷಿಣ ಕೊರಿಯಾ ತಂಡಕ್ಕೆ ಮುಖಾಮುಖಿಯಾಗಲಿದೆ.