ಮನೆ ಸ್ಥಳೀಯ ಜೂನ್ 12 ರಂದು ಅರ್ಥಪೂರ್ಣವಾಗಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ: ಡಾ. ಪಿ....

ಜೂನ್ 12 ರಂದು ಅರ್ಥಪೂರ್ಣವಾಗಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ: ಡಾ. ಪಿ. ಶಿವರಾಜು

0

ಮೈಸೂರು: ಮೈಸೂರು ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಜೂನ್ 12 ರಂದು ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೆ. ಎಲ್. ಬಿ. ರಸ್ತೆ, ಮೈಸೂರು ಇಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ. ಶಿವರಾಜು ತಿಳಿಸಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ನಿರ್ವಹಿಸುವ ಸಂಬಂಧ​ ಜಿಲ್ಲಾ ಬಾಲಕಾರ್ಮಿಕರ ಯೋಜನೆಯಡಿ ಸಾಧಿಸಲಾದ ಪ್ರಗತಿಯ ಬಗ್ಗೆ ಹಾಗೂ ಮುಂದೆ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಜಿಲ್ಲಾ ಮಟ್ಟದ ಕಾರ್ಯಕಾರಿ ಹಾಗೂ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಪ್ರತಿ ಗ್ರಾಮಗಳ ಗ್ರಾಮ ಪಂಚಾಯಿತಿ ವತಿಯಿಂದ ಜೂನ್ 12 ರಂದು ಬಾಲ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ಧತಿ ಕುರಿತು ಡಂಗೂರ ಸಾರಿಸುವಂತೆ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ನಗರಸಭೆ ಕಸ ವಿಲೇವಾರಿ ಮಾಡುವಂತ ವಾಹನಗಳಿಗೆ ಉಚಿತವಾಗಿ ಬಾಲ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ಧತಿ ಕುರಿತು ಘೋಷಣೆಗಳನ್ನು ಕೂಗುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಜೂನ್ 13 ರಿಂದ 30 ರವರೆಗೆ ಮೈಸೂರು ನಗರ ಪ್ರದೇಶ ಹಾಗೂ ಎಲ್ಲಾ​ ತಾಲ್ಲೂಕುಗಳಲ್ಲಿಯೂ ಅಧಿಕಾರಿಗಳ ತಂಡವು ಬಾಲ / ಕಿಶೋರ ಕಾರ್ಮಿಕರ ರಕ್ಷಣಾ ಕಾರ್ಯಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಖಾನೆಗಳು, ಗ್ಯಾರೇಜ್, ಕೈಗಾರಿಕಾ ಪ್ರದೇಶಗಳು, ಹೋಟೆಲ್ ಗಳು, ಅಂಗಡಿಗಳಲ್ಲಿ ಹೆಚ್ಚು ತಪಾಸಣೆ ನಡೆಸಲು ತಿಳಿಸಿದರು.

ಬಾಲ / ಕಿಶೋರ ಮಕ್ಕಳು ಎಂದಿಗೂ ಶಿಕ್ಷಣದಿಂದ ವಂಚಿತರಾಗಬಾರದು. ಶಾಲೆಯಿಂದ ಹೊರಗುಳಿದು ಬಾಲ / ಕಿಶೋರ ಕಾರ್ಮಿಕರಲ್ಲಿ ತೊಡಗಿದ್ದರೆ ಅವರನ್ನು ನೇಮಿಸಿಕೊಂಡಿದ್ದರೆ ಅಂತವರ ವಿರುದ್ಧ ಸೂಕ್ತ ಕ್ರಮ ವಹಿಸಲು​ ಅಧಿಕಾರಿಗಳಿಗೆ ಸೂಚಿಸಿದರು. ಬಾಲ / ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನಡೆಯುವ ಶಾಲೆಗಳಿಗೆ ಸದರಿ ಮಕ್ಕಳನ್ನು ಸೇರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ ಎಸ್. ಆರ್., ಕಾರ್ಮಿಕ ಅಧಿಕಾರಿಗಳಾದ ಚೇತನ್ ಕುಮಾರ್, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸೊಸೈಟಿಯ ಯೋಜನಾ ನಿರ್ದೇಶಕರು, ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ತಾಲ್ಲೂಕು ಕಾರ್ಮಿಕ ನಿರೀಕ್ಷಕರು, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜಕಲ್ಯಾಣ ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ​​ ಉಪಸ್ಥಿತರಿದ್ದರು.