ಶನಿವಾರ ಶನಿ ದೇವರ ಆರಾಧನೆಗೆ ಮಂಗಳಕರ ದಿನ. ಇದೇ ಕಾರಣದಿಂದ ಅಂದು ಎಲ್ಲರೂ ಬಲು ಭಕ್ತಿ ಭಾವದಿಂದ ದೇವರ ಪೂಜಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಶನಿಯ ಆಶೀರ್ವಾದವಿದ್ದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಶನಿ ದೇವರ ಆರಾಧನೆಯಿಂದ ಕಷ್ಟಗಳೆಲ್ಲಾ ದೂರ. ಶನಿ ದೇವರ ಕೃಪಾದೃಷ್ಟಿ ಇದ್ದರೆ ಎಲ್ಲಾ ಸಂಕಷ್ಟಗಳು, ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು, ಭವಿಷ್ಯದಲ್ಲಿ ಎದುರಾಗಬಹುದಾದಂತಹ ತೊಂದರೆಗಳೆಲ್ಲಾ ನಿವಾರಣೆಯಾಗುತ್ತವೆ. ಆದರೆ, ಒಂದೊಮ್ಮೆ ಶನಿ ದೇವರ ಕೋಪಕ್ಕೆ ತುತ್ತಾದರೆ ಇವೆಲ್ಲಾ ಸರಿ ಉಲ್ಟಾ ಆಗುವ ಜತೆಗೆ ಬದುಕಿನಲ್ಲಿ ನಾನಾ ದುಃಖಗಳು ಎದುರಾಗುತ್ತವೆ ಎಂಬುದು ಭಕ್ತರ ನಂಬಿಕೆ. ಇದೇ ಕಾರಣದಿಂದ ಶನಿವಾರ ಶನಿ ದೇವರನ್ನು ಎಲ್ಲರೂ ಭಕ್ತಿ ಭಾವದಿಂದ ಪೂಜಿಸುತ್ತಾರೆ. ಶನಿ ದೇವರ ಆಶೀರ್ವಾದ ಪಡೆಯಲು ಶನಿವಾರ ಏನೆಲ್ಲಾ ಮಾಡಬೇಕು, ಏನು ಮಾಡಬಾರದು.
ಶನಿ ದೇವರ ಕೃಪೆ – ವಾರದ ಪ್ರತಿ ದಿನ ಒಂದೊಂದು ದೇವರ ಪೂಜೆ ಮಂಗಳಕರ. ಅಂತೆಯೇ, ಶನಿವಾರ ಶನಿ ದೇವರನ್ನೂ ಆಸ್ತಿಕರು ಬಲು ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ. ನಂಬಿಕೆಯ ಪ್ರಕಾರ ಶನಿವಾರ ಶನಿದೇವರ ದಿನ. ಶನಿ ದೇವರನ್ನು ನ್ಯಾಯದ ದೇವರು ಎಂದೂ ನಮ್ಮ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗುತ್ತದೆ. ಶನಿ ದೇವರ ಆಶೀರ್ವಾದವಿದ್ದರೆ ಬದುಕು ಸಿಹಿಯಾಗಿರುತ್ತದೆ. ಶನಿ ದೇವರ ಕೋಪದ ದೃಷ್ಟಿ ಬಿದ್ದರೆ ರಾಜನೂ ಅಳಿದು ಹೋಗಬಹುದು ಮತ್ತು ಶನಿ ದೇವರ ಆಶೀರ್ವಾದವಿದ್ದರೆ ಬಡತನ ಮನೆಯಲ್ಲಿಯೂ ಸಂತೋಷಕ್ಕೆ ಕೊರತೆಯಾಗದು.
ಶನಿವಾರದ ಪರಿಹಾರಗಳು – ಬ್ರಹ್ಮ ಮುಹೂರ್ತದಲ್ಲಿ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಅರಳಿ ಮರಕ್ಕೆ ನೀರನ್ನು ಅರ್ಪಿಸುವಾಗ `ಓಂ ಶಂ ಶನೈಶ್ಚರಾಯ ನಮಃ’ ಮಂತ್ರವನ್ನು ಜಪಿಸಿ. ಅರಳಿ ಮರಕ್ಕೆ ನೀರನ್ನು ಅರ್ಪಿಸಿದ ಬಳಿಕ ಮರನ್ನು ಸ್ಪರ್ಶಿಸಿ ಹಾಗೂ ಪೂಜೆ ಸಲ್ಲಿಸಿದ ನಂತರ ಮರಕ್ಕೆ ಏಳು ಸುತ್ತು ಪ್ರದಕ್ಷಿಣೆ ಬನ್ನಿ. ದಾಂಪತ್ಯ ಜೀವನ ಸುಖಮಯವಾಗಿರಲು ಶನಿವಾರದಂದು ಸ್ವಲ್ಪ ಕಪ್ಪು ಎಳ್ಳನ್ನು ಅರಳಿ ಮರದ ಬಳಿ ಅರ್ಪಿಸಿ. ಬಳಿಕ ಅರಳಿ ಮರಕ್ಕೆ ನೀರನ್ನು ಅರ್ಪಿಸಿ.
ಎಣ್ಣೆಯಿಂದ ಮಾಡಿದ ಆಹಾರವನ್ನು ಶನಿವಾರ ಬಡವರಿಗೆ ದಾನ ಮಾಡಿದರೆ ದೇವರು ಪ್ರಸನ್ನರಾಗುತ್ತಾರೆ ಎಂಬುದು ನಂಬಿಕೆ. ಶನಿವಾರ ಕಪ್ಪು ಎಳ್ಳು ಉಂಡೆಯನ್ನು ಬಡವರಿಗೆ ದಾನ ಮಾಡುವುದು ಕೂಡಾ ಉತ್ತಮವಂತೆ, ಶನಿವಾರದಂದು ಸುಂದರಕಾಂಡ ಪಾರಾಯಣ ಕೂಡಾ ಮಂಗಳಕರ ಎಂಬ ನಂಬಿಕೆ ಇದೆ. ಹಿಂದೂ ಧರ್ಮೀಯರ ನಂಬಿಕೆಯ ಪ್ರಕಾರ, ಸುಂದರಕಾಂಡವನ್ನು ಪಠಿಸುವವರ ಆಸೆಗಳು ಶೀಘ್ರದಲ್ಲೇ ಈಡೇರುತ್ತದೆ.
ಶನಿವಾರ ಕಪ್ಪು ಶ್ವಾನ ಮತ್ತು ಕಪ್ಪು ಹಸುವಿಗೆ ಆಹಾರ ನೀಡುವುದು ಹಾಗೂ ಕಪ್ಪು ಹಕ್ಕಿಗೆ ಧಾನ್ಯವನ್ನು ಹಾಕುವುದು ಮಂಗಳಕರ ಎಂಬುದು ನಂಬಿಕೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಶನಿವಾರ 11 ಅರಳಿ ಎಲೆಗಳನ್ನು ತೆಗೆದುಕೊಂಡು ಅದರಿಂದ ಮಾಲೆ ಮಾಡಿ ಶನಿ ದೇವಸ್ಥಾನಕ್ಕೆ ಹೋಗಿ ಶನಿದೇವನಿಗೆ ಈ ಮಾಲೆಯನ್ನು ಅರ್ಪಿಸಿ. ಇದರಿಂದ ಒಳಿತಾಗುತ್ತದೆ ಎಂಬುದು ನಂಬಿಕೆ. ಶನಿವಾರ ಬೆಳಗ್ಗೆ ಬೇಗ ಎದ್ದು ಹಿಟ್ಟಿನಲ್ಲಿ ಸಕ್ಕರೆ ಮತ್ತು ಕಪ್ಪು ಎಳ್ಳನ್ನು ಬೆರೆಸಿ ಇರುವೆಗಳಿಗೆ ತಿನ್ನಿಸಿ. ಶನಿ ದೋಷವನ್ನು ತೊಡೆದು ಹಾಕಲು ಈ ಪರಿಹಾರ ಸಹಕಾರಿ ಎಂಬ ನಂಬಿಕೆ ಇದೆ.
ಕರ್ಮಕ್ಕೆ ತಕ್ಕ ಫಲ – ಶನಿ ದೇವರು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಅಂದರೆ, ಮನುಷ್ಯರ ಕರ್ಮಗಳಿಗೆ ಅನುಗುಣವಾಗಿ ಶನಿ ದೇವರ ಫಲಿತಾಂಶಗಳು ಇರುತ್ತವೆ. ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೆ ಉತ್ತಮ ಫಲಿತಾಂಶವನ್ನೂ, ಕೆಟ್ಟ ಕಾರ್ಯಗಳಿಗೆ ಕೆಟ್ಟ ಫಲಿತಾಂಶವನ್ನೂ ಶನಿ ದೇವರು ನೀಡುತ್ತಾರೆ ಎಂಬುದು ಆಸ್ತಿಕರ ನಂಬಿಕೆ. ಆದರೆ, ಒಂದೊಂದು ಸಲ ನಮಗೆ ಅರಿವಿಲ್ಲದೆ ನಾವು ಮಾಡುವ ಕೆಲಸಗಳು ಕೆಟ್ಟ ಫಲಿತಾಶಗಳನ್ನು ನೀಡುತ್ತವೆ.
ಶನಿವಾರ ಈ ಕೆಲಸಗಳನ್ನು ಮಾಡಬೇಡಿ – ಪ್ರಾಮಾಣಿಕ ಜೀವನ ನಡೆಸಿದರೆ ದೇವರ ಆಶೀರ್ವಾದ ಇದ್ದೇ ಇರುತ್ತದೆ. ಅಂತೆಯೇ, ಶನಿವಾರ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿ ದೇವರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬ ನಂಬಿಕೆಯೂ ಇದೆ. ಶನಿ ದೇವರ ಕೃಪೆಯನ್ನು ಪಡೆಯಲು ಶನಿವಾರ ಸಾಸಿವೆ ಎಣ್ಣೆಯನ್ನು ದಾನ ಮಾಡುವುದು ಮತ್ತು ಸಾಸಿವೆ ಎಣ್ಣೆ ದೀಪ ಹಚ್ಚುವುದು ಒಳ್ಳೆಯದು ಎಂಬುದು ನಂಬಿಕೆ.
ಶನಿ ದೇವರ ಪೂಜೆ – ಶನಿವಾರ ಶನಿ ದೇವರೊಂದಿಗೆ ಆಂಜನೇಯ ಸ್ವಾಮಿ, ಪರಮೇಶ್ವರನ ಪೂಜೆಯನ್ನೂ ಮಾಡಲಾಗುತ್ತದೆ. ಶನಿವಾರದಂದು ಶಿವ ಚಾಲೀಸವನ್ನು ಪಠಿಸುವುದರಿಂದ ಶನಿ ದೇವರು ಪ್ರಸನ್ನರಾಗುತ್ತಾರೆ ಎಂಬ ನಂಬಿಕೆ ಕೂಡಾ ಇದೆ. ಶನಿ ದೇವರನ್ನು ನಿರ್ಮಲ ಮನಸ್ಸಿನಿಂದ ಪೂಜಿಸುವುದರಿಂದ, ನಿಯಮಗಳ ಪ್ರಕಾರ ಉಪವಾಸ ಮಾಡುವುದರಿಂದ ದೇವರು ಪ್ರಸನ್ನರಾಗುತ್ತಾರೆ ಎಂಬುದು ನಂಬಿಕೆ. ಹೀಗಾಗಿ, ಒಳ್ಳೆಯ ಜೀವನ ನಡೆಸುವ ಮೂಲಕ, ಅಸಹಾಯಕರಿಗೆ, ಬಡವರಿಗೆ ಸಹಾಯ ಮಾಡುತ್ತಾ, ಶಕ್ತಿಯಾನುಸಾರ ದಾನ ಧರ್ಮಾದಿ ಕಾರ್ಯಗಳನ್ನು ಮಾಡುತ್ತಾ ಬದುಕಿನ ಆನಂದ ಅನುಭವಿಸುವುದು ಮುಖ್ಯವಾಗಿದೆ.














