ಯಾದಗಿರಿ: ನಕಲಿ ಅಂಕಪಟ್ಟಿ ನೀಡಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ಹುದ್ದೆ ಪಡೆದ 14 ಜನರ ಬಗ್ಗೆ ಮಾಹಿತಿ ನೀಡುವಂತೆ ಡಿಹೆಚ್ಒಗೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರ ಸೂಚನೆ ನೀಡಿದ್ದಾರೆ.
2015ರಲ್ಲಿ ಇಲಾಖೆಯ ಡಿ ಗ್ರೂಪ್ ಹುದ್ದೆಗೆ ನೇಮಕಾತಿ ನಡೆದಿತ್ತು. ಎಸ್ಎಸ್ಎಲ್ಸಿ ವಿದ್ಯಾರ್ಹತೆಯ ಮೇಲೆ ಗ್ರೂಪ್-ಡಿ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ನೇರ ನೇಮಕಾತಿ ನಡೆದಿತ್ತು. ನೇಮಕಾತಿ ವೇಳೆ 14 ಮಂದಿ ನಕಲಿ ದಾಖಲೆ ನೀಡಿದ್ದಾರೆ. ನಕಲಿ ಅಂಕಪಟ್ಟಿ ನೀಡಿದವರ ಬಗ್ಗೆ 9 ವರ್ಷದ ಬಳಿಕ ಆರೋಗ್ಯ ಇಲಾಖೆಗೆ ದೂರು ನೀಡಲಾಗಿದೆ. ದೂರಿನ ಬೆನ್ನಲ್ಲೇ ಎಚ್ಚೆತ್ತ ಇಲಾಖೆ ಈ 14 ಜನರ ಬಗ್ಗೆ ಮಾಹಿತಿ ನೀಡುವಂತೆ ಯಾದಗಿರಿ ಡಿಹೆಚ್ಒಗೆ ಸೂಚನೆ ನೀಡಿದ್ದಾರೆ.
ನೌಕರರು ಸಲ್ಲಿಸಿರುವ ಎಸ್ಎಸ್ಎಲ್ಸಿ ಅಂಕಪಟ್ಟಿಯ ಮಾರ್ಕ್ಸ್ ಮತ್ತು ಕಚೇರಿಯ ಸಂಪುಟದಲ್ಲಿನ ಅಂಕಗಳಿಗೆ ತಾಳೆ ಹೊಂದುತ್ತಿಲ್ಲ. ನೌಕರರಿಗೆ ನೈಜತೆ ಪ್ರಮಾಣ ಪತ್ರ ನೀಡಿಲ್ಲ. 14 ನೌಕರರ ಜನ್ಮ ದಿನಾಂಕ, ನೌಕರರು ಸೇವೆಗೆ ಸೇರಿದ ದಿನಾಂಕ, ಆದೇಶ ಪ್ರತಿ ಸೇರಿದಂತೆ ನಿರ್ದೇಶನಾಲಯ ಒಟ್ಟು ಆರು ಮಾಹಿತಿ ಕೇಳಿದೆ.
ನಿರ್ದೇಶನಾಲಯದ ಸೂಚನೆ ಮೇರೆಗೆ ಯಾದಗಿರಿ ಆರೋಗ್ಯ ಅಧಿಕಾರಿಗಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸ್ತಿರುವ ನೌಕರರ ಮಾಹಿತಿ ಸಂಗ್ರಹಿಸಿದ್ದಾರೆ.