ಮನೆ ರಾಜ್ಯ ವಾಣಿ ವಿಲಾಸ, ಗಾಯಿತ್ರಿ ಜಲಾಶಯಕ್ಕೆ ಭೇಟಿ ನೀಡಿದ ಯದುವೀರ್‌, ತ್ರಿಷಿಕಾ ಕುಮಾರಿ

ವಾಣಿ ವಿಲಾಸ, ಗಾಯಿತ್ರಿ ಜಲಾಶಯಕ್ಕೆ ಭೇಟಿ ನೀಡಿದ ಯದುವೀರ್‌, ತ್ರಿಷಿಕಾ ಕುಮಾರಿ

0

ಚಿತ್ರದುರ್ಗ (Chitradurga): ವಾಣಿ ವಿಲಾಸ ಜಲಾಶಯ ಹಾಗೂ ಗಾಯಿತ್ರಿ ಜಲಾಶಯಕ್ಕೆ ಮೈಸೂರು ಮಹಾರಾಜರಾದ ಯದುವೀರ್‌ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿ ಭೇಟಿ ನೀಡಿ ಡ್ಯಾಂ ವೀಕ್ಷಣೆ ಮಾಡಿದರು.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಇರುವ ವಾಣಿ ವಿಲಾಸ ಜಲಾಶಯ ಹಾಗೂ ಜವನಗೊಂಡನ ಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಯಿತ್ರಿ ಜಲಾಶಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಡ್ಯಾಂ ವೀಕ್ಷಣೆ ಮಾಡಿ ಕಣ್ತುಂಬಿಕೊಂಡರು.

ಅಜ್ಜಿಯ ಹೆಸರಿನ ಎರಡು ಜಲಾಶಯಗಳನ್ನು ಮೊಮ್ಮಗ ಯದುವೀರ್ ವೀಕ್ಷಣೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಯದುವೀರ್ ಮತ್ತು ಶ್ರೀಮತಿ ತ್ರಿಷಿಕಾ ಕುಮಾರಿಯವರು ಜಲಾಶಯ ವೀಕ್ಷಿಸಿದ ಬಳಿಕ ಪೋಟೋ ತೆಗೆಸಿಕೊಂಡಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಂದ ಜಲಾಶಯದ ವಿಸ್ತೀರ್ಣ, ನೀರಿನ ಸಾಮರ್ಥ್ಯ, ಉಪಯೋಗ ಸೇರಿದಂತೆ ಡ್ಯಾಂ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ರಾಜ ಮಾತೆ ಪ್ರಮೋದಾ ದೇವಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಜೊತೆಗಿದ್ದರು.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ಎರಡು ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಜಯಚಾಮರಾಜ ಒಡೆಯರ್ ಅವರ ಮನೆತನದ ಹೆಣ್ಣು ಮಗಳಾದ ಗಾಯಿತ್ರಿ ದೇವಿಯ ನೆನಪಿಗಾಗಿ ಜಲಾಶಯ ನಿರ್ಮಿಸಿ, ಅವರ ಹೆಸರನ್ನೇ ಗಾಯಿತ್ರಿ ಡ್ಯಾಂಗೆ ಹಾಗೂ ವಿವಿ ಸಾಗರ ಜಲಾಶಯಕ್ಕೆ ಕೆಂಪರಾಜಮ್ಮಣಿ ಹೆಸರನ್ನು ನಾಮಕರಣ ಮಾಡಲಾಗಿದೆ.