ಮೈಸೂರು(Mysuru): ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಯು ಎ ಇ ಕನ್ನಡ ಸಮುದಾಯ ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡುವುದಾಗಿ ತಿಳಿಸಿದ್ದು, ಅದನ್ನು ವಿನಮ್ರವಾಗಿ ಒಡೆಯರ್ ತಿರಸ್ಕರಿಸಿದ್ದಾರೆ.
“ನನಗೆ ಅಂತರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂಬ ಸುದ್ದಿ ಮುದ್ರಣ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ” ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ಹಾಗೆ ಈ ಗೌರವವನ್ನು ಸ್ವೀಕರಿಸಲು ನಾನು ಯೋಗ್ಯ ಎಂದು ಪರಿಗಣಿಸಿದ್ದಕ್ಕಾಗಿ ನಾನು ಸಂಘಟಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ, ಆದರೆ ಈ ಸಮಯದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ನನಗೆ ಸೂಕ್ತವೆಂದೆನಿಸುತ್ತಿಲ್ಲ ಎಂದು ಹೇಳಿದ್ದಾರೆ.
ನಮ್ಮ ರಾಜ್ಯ ಮತ್ತು ನಮ್ಮ ಕನ್ನಡ ಸಮುದಾಯದ ಕಲ್ಯಾಣಕ್ಕಾಗಿ ನಾನು ಯಾವಾಗಲೂ ಶ್ರಮಿಸುತ್ತೇನೆ ಮತ್ತು ಆ ಬದ್ಧತೆಯು ಪ್ರತಿಫಲದ ನಿರೀಕ್ಷೆಯಿಲ್ಲದೆ ಇರುತ್ತದೆ. ನಾನು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದೇನೆ ಮತ್ತು U.A.E ಯಲ್ಲಿರುವ ನಮ್ಮ ಕನ್ನಡ ಸಮುದಾಯವನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ ಎಂದು ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.