ಯಲ್ಲಾಪುರ: ಯಲ್ಲಾಪುರ ಶಿರಸಿ ಸಂಪರ್ಕದ ತಾಳಗುಪ್ಪ – ಖಾನಾಪುರ ರಾಜ್ಯ ಹೆದ್ದಾರಿ ಬೇಡ್ತಿ ಸೇತುವೆ ಕೆಳಭಾಗದಲ್ಲಿ ಶೇಖರಣೆಗೊಂಡಿದ್ದ ಮರಮಟ್ಟುಗಳಿಗೆ ಅಕಸ್ಮಿಕ ಬೆಂಕಿ ತಗುಲಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಬೇಡ್ತಿ ಸೇತುವೆಯ ತಳಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಗಾಲದ ವೇಳೆ ಅಪಾರ ಪ್ರಮಾಣದಲ್ಲಿ ಮರಮಟ್ಟುಗಳು ಬಂದು ಜಮಾಗೊಂಡಿದ್ದವು. ಇದೀಗ ಬೆಂಕಿ ಹೊತ್ತಿಕೊಂಡಿತು ಉರಿದಿದೆ, ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಬೆಂಕಿಯ ಕೆನ್ನಸಲಗೆ ಬೇಡ್ತಿ ಸೇತುವೆ ಕಂಬ ಹಾಗು ರಸ್ತೆಯ ಡಾಂಬರಿಗೆ ಅಪಾಯ ಉಂಟಾಗುವ ಸಂಭವವಿತ್ತು, ಅರಣ್ಯ ಇಲಾಖೆ ಮತ್ರು ಅಗ್ನಿಶಾಮಕದಳದ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದರೆನ್ನಲಾಗಿದೆ.
ಸೇತುವೆಯ ತಳಭಾಗದಲ್ಲಿ ಶೇಖರಣೆಗೊಂಡಿರುವ ಮರಮಟ್ಟುಗಳನ್ನು ತೆಗೆದು ಸ್ವಚ್ಚಗೊಳಿಸಬೇಕೆಂದು ಕೆಲ ದಿನಗಳ ಹಿಂದಷ್ಟೆ ಅಭಿಪ್ರಾಯ ವ್ಯಕ್ತವಾಗಿತ್ತು. ಈ ನಡುವೆ ಬೆಂಕಿ ಅವಘಡ ಸಂಭವಿಸಿದೆ. ಅವಘಡದಿಂದ ಸೇತುವೆಗೆ ಧಕ್ಕೆಯಾಗಿದೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.