ನವದೆಹಲಿ : ವಿಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಭಾರತ ಮೊದಲ ದಿನವೇ 300 ರನ್‌ಗಳ ಗಡಿ ದಾಟಿದೆ. ಮೊದಲ ದಿನದ ಅಂತ್ಯಕ್ಕೆ ಕೇವಲ 2 ವಿಕೆಟ್‌ಗೆ 90 ಓವರ್‌ಗಳಲ್ಲಿ 318 ರನ್ ಸಿಡಿಸಿದ್ದು, ಬೃಹತ್ ಮೊತ್ತ ಪೇರಿಸುವ ವಿಶ್ವಾಸದಲ್ಲಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ವಿಕೆಟ್ ಬಿಟ್ಟುಕೊಡದೇ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. 173 ರನ್ ಗಳಿಸಿ ಕ್ರೀಸ್‌ನಲ್ಲಿರುವ ಯಶಸ್ವಿ ಮತ್ತೊಮ್ಮೆ ದ್ವಿಶತಕ ಸಿಡಿಸುವ ವಿಶ್ವಾಸದಲ್ಲಿದ್ದಾರೆ.
ಭಾರತ ಪರ ಕೆ.ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ವಿಕೆಟ್‌ಗೆ ಈ ಜೋಡಿ 58 ರನ್‌ಗಳ ಜೊತೆಯಾಟ ಆಡಿತು. ರಾಹುಲ್ 54 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು. ಊಟದ ವಿರಾಮದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 145 ಎಸೆತಗಳಲ್ಲಿ 16 ಫೋರ್ನೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 7ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದರು. ಅತ್ತ ಸಾಯಿ ಸುದರ್ಶನ್ ಕೂಡ ಅರ್ಧಶತಕ ಸಿಡಿಸಿ ಮಿಂಚಿದರು.
ಅರ್ಧಶತಕ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಸುದರ್ಶನ್ ಶತಕ ವಂಚಿತರಾದರು. 165 ಎಸೆತಗಳಲ್ಲಿ 12 ಬೌಂಡರಿ ಸಹಿತ 87 ರನ್ ಗಳಿಸಿ ಔಟಾದರು. ನಂತರ ಕ್ರೀಸ್‌ಗೆ ಬಂದ ಶುಭಮನ್ ಗಿಲ್ 68 ಎಸೆತಗಳಲ್ಲಿ 20 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ದಿನದ ಕೊನೆಯವರೆಗೂ ವಿಕೆಟ್ ಬಿಟ್ಟು ಕೊಡದ ಜೈಸ್ವಾಲ್ 253 ಎಸೆತಗಳಲ್ಲಿ 22 ಬೌಂಡರಿ ಸಹಿತ 173 ರನ್ ಬಾರಿಸಿದ್ದಾರೆ. ಶನಿವಾರ 2ನೇ ದಿನದ ಆಟ ಮುಂದುವರಿಸಲಿದ್ದಾರೆ.















