ಮನೆ ರಾಜ್ಯ ಯಶ್‌ ತಾಯಿ ಸೈಟ್‌ ವಿವಾದ; ಏಕಪಕ್ಷೀಯ ತೀರ್ಪಿಗೆ ಕೋರ್ಟ್ ತಾತ್ಕಾಲಿಕ ತಡೆ..!

ಯಶ್‌ ತಾಯಿ ಸೈಟ್‌ ವಿವಾದ; ಏಕಪಕ್ಷೀಯ ತೀರ್ಪಿಗೆ ಕೋರ್ಟ್ ತಾತ್ಕಾಲಿಕ ತಡೆ..!

0

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಖರೀದಿಸಿದ್ದ ಸೈಟ್ ಮಾಲೀಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ಹಾಸನದ ನಾಲ್ಕನೇ ಜೆಎಂಎಫ್‍ಸಿ ನ್ಯಾಯಾಲ‌ಯ ನೀಡಿದ್ದ ಏಕಪಕ್ಷೀಯ ತೀರ್ಪಿಗೆ ತಾತ್ಕಾಲಿಕ ತಡೆ ನೀಡಿದೆ.

ಮೂಲ ದಾವೆ ಸಂಬಂಧ ವಿಚಾರಣೆ ನಡೆಸಿ 2025ರ ಏ.16 ರಂದು ನೀಡಲಾಗಿದ್ದ ಏಕಪಕ್ಷೀಯ ತೀರ್ಪಿನ ಜಾರಿಗೆ ತಾತ್ಕಾಲಿಕ ತಡೆ ನೀಡಿದೆ. ಸೈಟ್‍ನ ಮಾಲೀಕತ್ವವನ್ನು ಲಕ್ಷ್ಮಮ್ಮ ಅವರ ಪರವಾಗಿ ಜಿಪಿಎ ಹೋಲ್ಡರ್ ದೇವರಾಜು ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಅವರು ದಾಖಲಿಸಿದ್ದ ಒಎಸ್ ನಂ. 672/2023 ಪ್ರಕರಣದಲ್ಲಿ ನೀಡಿದ್ದ ಆದೇಶದ ಅನುಷ್ಠಾನಕ್ಕೆ ನ್ಯಾಯಾಲಯ ತಡೆ ನೀಡಿದೆ.

ತಮ್ಮನ್ನು ಕಕ್ಷಿದಾರರಾಗಿ ಪರಿಗಣಿಸದೇ ಏಕಪಕ್ಷೀಯ ಆದೇಶ ನೀಡಲಾಗಿದೆ ಹಾಗೂ ಕೋರ್ಟ್ ಆದೇಶ ಬಂದ ನಂತರ 90 ದಿನಗಳೊಳಗೆ ಮೇಲ್ಮನವಿ ಸಲ್ಲಿಸದ ಬಗ್ಗೆಯೂ ಪುಷ್ಪಾ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಆ ವಿಳಂಬ ಅರ್ಜಿಯನ್ನು ಮಾನ್ಯಗೊಳಿಸಿದೆ.

ಈ ಪ್ರಕರಣದಲ್ಲಿ ಕಕ್ಷಿದಾರರಾಗಿ ಹಾಜರಾಗಲು ಅವಕಾಶ ನೀಡಿದೆ. ಇದಲ್ಲದೆ, ಪ್ರಸ್ತುತ ದಾಖಲಾಗಿರುವ ದಾವೆ ಇತ್ಯರ್ಥವಾಗುವವರೆಗೆ ಒಎಸ್ ನಂ. 672/2023ರ ಆದೇಶ ಜಾರಿ ಅಥವಾ ಅನುಷ್ಠಾನಕ್ಕೆ ಸಂಪೂರ್ಣ ತಡೆ ನೀಡಲಾಗಿದೆ. ವಿವಾದಿತ ಸೆಡ್ಯೂಲ್ ಪ್ರಾಪರ್ಟಿಯನ್ನು ಪರಭಾರೆ ಮಾಡುವುದು ಅಥವಾ ಮೂಲ ಸ್ವರೂಪ ಬದಲಾವಣೆ ಮಾಡುವುದನ್ನು ಅರ್ಜಿದಾರರಿಗೆ ನಿರ್ಬಂಧಿಸಲಾಗಿದೆ. ಮುಂದಿನ ವಿಚಾರಣೆಯನ್ನು ಫೆ.18 ಕ್ಕೆ ಮುಂದೂಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯಶ್ ತಾಯಿ ಪುಷ್ಪಾ, ನಿವೇಶನ ವಿಚಾರವಾಗಿ ಕೆಲ ದಿನಗಳಿಂದ ಗಲಾಟೆ ಆರಂಭವಾಗಿದ್ದು, ಜಾಗ ತಮ್ಮದೋ ಅಥವಾ ದೇವರಾಜು ಅವರದ್ದೋ ಎಂಬುದನ್ನು ಪರಿಶೀಲನೆ ನಡೆಸಿ ನ್ಯಾಯಾಲಯ ತಡೆಯಾಜ್ಞೆ ನೀಡಿ, ನಮಗೂ ವಾದಿಸಲು ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ ಜಾಗ ಯಾರಿಗೆ ಸೇರಿದ್ದು ಎಂಬುದು ಸ್ಪಷ್ಟವಾಗುತ್ತದೆ. ಅವರು ಹೇಳುತ್ತಿರುವುದು ಬೇರೆ ಜಾಗ. ನಮ್ಮ ಹೆಸರು, ವಿಳಾಸ ನೀಡಿರುವುದರಿಂದಲೇ ಕೋರ್ಟ್ ತಡೆಯಾಜ್ಞೆ ನೀಡಿದೆ. ನಮಗೆ ಮೊದಲಿನಿಂದಲೂ ಇದು ನಮ್ಮದೇ ಜಾಗ ಎಂಬ ಖಾತ್ರಿ ಇತ್ತು ಎಂದು ತಿಳಿಸಿದ್ದಾರೆ.