ಮೈಸೂರು (Mysuru): ಯಡಿಯೂರಪ್ಪ ಅವರು ನಿಜವಾದ ಜನನಾಯಕ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ತಂದೆಯನ್ನು ಹಾಡಿ ಹೊಗಳಿದ್ದಾರೆ.
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಾರಾದರೂ ಸಿಎಂ, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮನೆಗೆ ಹೋಗಿ ದಬಾಕಿಕೊಂಡು ಮಲಗುತ್ತಾರೆ. ಯಡಿಯೂರಪ್ಪ ಅವರು ಆ ರೀತಿ ಅಲ್ಲ. ರಾಜೀನಾಮೆ ಕೊಟ್ಟ ಮರು ಕ್ಷಣದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಶಾಸಕರು, ಮಂತ್ರಿ, ಸಂಸದ ಅಂತಾ ಇರುತ್ತಾರೆ. ಅವರೆಲ್ಲಾ ಅಧಿಕಾರದಲ್ಲಿ ಇರುವವರೆಗೂ ನಾಯಕರಾಗಿರುತ್ತಾರೆ. ಆದರೆ, ಯಡಿಯೂರಪ್ಪಗೆ ಯಾವುದೇ ಅಧಿಕಾರ ಇರದಿದ್ದರೂ ಜನ ಅವರ ಜೊತೆಯಲ್ಲಿ ಇದ್ದಾರೆ. ಯಡಿಯೂರಪ್ಪ ಅವರೊಬ್ಬರೇ ನಿಜವಾದ ಜನನಾಯಕ ಎಂದಿದ್ದಾರೆ.
ಅಧಿಕಾರಕ್ಕಾಗಿ ಜೋತು ಬೀಳದೆ ಕೆಲಸ ಮಾಡಿದವರು ಯಡಿಯೂರಪ್ಪ. ಬಡವರ ಮನೆಗೆ ಬೆಳಕು ತಂದವರು ಯಡಿಯೂರಪ್ಪ ಅವರು ಮಾತ್ರ. ಯಡಿಯೂರಪ್ಪ ಅವರು ಸಿಎಂ ಆಗಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಬೇರೆ ಯಾವ ಸಿಎಂಗಳು ಮಾಡಿಲ್ಲ. ಜನನಾಯಕ ಎಂದು ಎನ್ನಿಸಿ ಕೊಂಡ ಏಕೈಕ ನಾಯಕ ಯಡಿಯೂರಪ್ಪ ಎಂದು ಹೇಳಿದ್ದಾರೆ.
ಮುಂದಿನ ಸಿಎಂ ಕೂಗು:
ಕಾಂಗ್ರೆಸ್ ಬಳಿಕ ಇದೀಗ ಬಿಜೆಪಿಯಲ್ಲಿ ಮುಂದಿನ ಸಿಎಂ ಕೂಗು ಕೇಳಿಬಂದಿದೆ. ಮುಂದಿನ ಸಿಎಂ ವಿಜಯೇಂದ್ರ ಘೋಷಣೆಯನ್ನು ಕಾರ್ಯಕರ್ತರು ಕೂಗಿದ್ದಾರೆ. ಸಚಿವ ವಿ. ಸೋಮಣ್ಣ ಅವರು ಆಗಮಿಸುತ್ತಿದ್ದಂತೆ ವಿಜಯೇಂದ್ರಗೆ ಜೈಕಾರ ಕೂಗಿ ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದಾರೆ.
ಈ ವೇಳೆ ಸೋಮಣ್ಣ ಅವರು ವೇದಿಕೆ ಕಡೆ ತೆರಳಿದ್ದಾರೆ. ಜೈಕಾರ ಕೂಗುತ್ತಿದ್ದಂತೆ ವೇದಿಕೆ ಮೇಲಿಂದ ಎದ್ದು ಬಂದ ವಿಜಯೇಂದ್ರ ಅವರು ವೈಯಕ್ತಿಕ ಘೋಷಣೆ ಬೇಡ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಆದರೂ ಜೈಕಾರ ಕೂಗುವುದನ್ನು ನಿಲ್ಲಿಸಲಿಲ್ಲ. ಇದರಿಂದ ಸೋಮಣ್ಣ ಅವರು ಇರುಸು-ಮುರುಸು ಅನುಭವಿಸಿದ್ದಾರೆ. ಬಳಿಕ ಇಬ್ಬರು ನಾಯಕರುಗಳಿಗೆ ಭಾರಿ ಗಾತ್ರದ ಹೂವಿನ ಹಾರ ಹಾಕಿ ಸನ್ಮಾನ ಮಾಡಲಾಗಿದೆ.