ಮನೆ ರಾಜಕೀಯ ಮೂರು ಕ್ಷೇತ್ರಗಳ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ: ಬಸನಗೌಡ ಪಾಟೀಲ್​ ಯತ್ನಾಳ್ ಕಿಡಿ

ಮೂರು ಕ್ಷೇತ್ರಗಳ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ: ಬಸನಗೌಡ ಪಾಟೀಲ್​ ಯತ್ನಾಳ್ ಕಿಡಿ

0

ಚಿಕ್ಕೋಡಿ(ಬೆಳಗಾವಿ): “ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಸೋಲಿಗೆ ಪೂಜ್ಯ ತಂದೆ ಮತ್ತು ಪೂಜ್ಯ ತಂದೆಯ ಕಿರಿಯ ಮಗ ಕಾರಣ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

Join Our Whatsapp Group

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಒಳ ಒಪ್ಪಂದದಿಂದ ರಾಜ್ಯದಲ್ಲಿ ಬಿಜೆಪಿ ಈ ಸ್ಥಿತಿಗೆ ಬಂದು ತಲುಪಿದೆ ಎಂದರು.

“ಹೈಕಮಾಂಡ್​ ಇನ್ನಾದರೂ ಪ್ರಮಾಣಿಕರನ್ನು, ಸ್ವಲ್ಪ ಸಂಸ್ಕಾರ ಇರುವಂತವರನ್ನು ರಾಜ್ಯ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಿ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್​ ಸಿಂಗ್​, ಯಡಿಯೂರಪ್ಪ ಮತ್ತು ವಿಜಯೇಂದ್ರನ ಸಂದೇಶ ವಾಹಕನಾಗಿ ಕೆಲಸ ಮಾಡಿದ ಪರಿಣಾಮ ಸೋಲಾಗಿದೆ. ಹೈಕಮಾಂಡ್​ ಇನ್ನಾದರೂ ಪೂಜ್ಯ ತಂದೆ ಮತ್ತು ಪೂಜ್ಯ ಮಗನ ಮೇಲಿನ ವ್ಯಾಮೋಹವನ್ನು ಬಿಡಬೇಕು ಎಂದು ಮನವಿ ಮಾಡುತ್ತೇನೆ” ಎಂದು ಹೇಳಿದರು.

“ರಾಜ್ಯದಲ್ಲಿ ರೈತರಿಗೆ ವಕ್ಫ್ ನೋಟಿಸ್​ ವಿಚಾರ ಮಹಾರಾಷ್ಟ್ರ ಚುನಾವಣೆ ಮೇಲೆ ಪರಿಣಾಮ ಬೀರಿದೆ. ವಕ್ಫ್​ದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಇನ್ನು ನಾವು ಜನರಿಗೆ ತಿಳಿವಳಿಕೆ ಮೂಡಿಸಬೇಕಾಗಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದರು. ಔರಂಗಜೇಬ್ ಸಮಾಧಿಗೆ ನಮಸ್ಕಾರ ಮಾಡಿದ್ದರಿಂದ ಮಹಾರಾಷ್ಟ್ರ ಜನರು ಉದ್ಧವ್ ಠಾಕ್ರೆ ಅವರನ್ನು ರಾಜಕೀಯವಾಗಿ ಮುಗಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಸಾಧನೆ ಮಾಡಿದೆ” ಎಂದರು.