ಬೆಳಗಾವಿ : ವಿಧಾನ ಪರಿಷತ್ನಲ್ಲಿಂದು ವಿಪಕ್ಷಗಳು ಧರಿಸಿಕೊಂಡು ಬಂದಿದ್ದ, ಹಳದಿ ಪೇಟ ಗದ್ದಲ ಗಲಾಟೆಗೆ ಕಾರಣವಾಗಿ ಕಲಾಪ ಮುಂದೂಡಿದ ಪ್ರಸಂಗ ನಡೆಯಿತು.
ರೈತರ ಹೋರಾಟದಲ್ಲಿ ಭಾಗಿಯಾಗಿದ್ದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ವಿಪಕ್ಷ ಸಚೇತಕ ರವಿಕುಮಾರ್ ಹಳದಿ ಪೇಟ ಮತ್ತು ಹಸಿರು ಶಾಲ್ ಧರಿಸಿ ಕಲಾಪಕ್ಕೆ ಹಾಜರಾಗಿದ್ದರು. ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ರೈತರ ಪ್ರತಿಭಟನೆ ಬಗ್ಗೆ ವಿಷಯ ಪ್ರಸ್ತಾಪಕ್ಕೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎದ್ದರು.
ಈ ವೇಳೆ ಎದ್ದ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಬಿಜೆಪಿ ಅವರು ಎಂಇಎಸ್ ಏಕೀಕರಣ ಬಣ್ಣದ ಪೇಟ ಹಾಕಿಕೊಂಡು ಬಂದಿದ್ದಾರೆ. ಇದನ್ನ ನಾನು ಖಂಡಿಸುತ್ತೇನೆ. ಯಾವತ್ತು ಸದನದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಎಂಇಎಸ್ ಏಕೀಕರಣ ಬಣ್ಣದ ಪೇಟೆ ತೆಗೆಯಬೇಕು ಎಂದು ಆಗ್ರಹ ಮಾಡಿದರು.
ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ಮಾಡಿದರು. ಈ ವೇಳೆ ಸದನದಲ್ಲಿ ಗದ್ದಲ ಗಲಾಟೆ ನಡೆಯಿತು. ರೈತ ವಿರೋಧಿ ಸರ್ಕಾರ ಅಂತ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಆಡಳಿತ-ವಿಪಕ್ಷಗಳ ನಡುವೆ ಪರಸ್ಪರ ಘೋಷಣೆ ಕೂಗಿ ಗದ್ದಲ ಗಲಾಟೆ ಹೆಚ್ಚಾದ ಕಾರಣ ಉಪ ಸಭಾಪತಿ ಪ್ರಾಣೇಶ್ ಕಲಾಪವನ್ನ ಮುಂದೂಡಿಕೆ ಮಾಡಿದರು.














