ಬೆಂಗಳೂರು : ಎತ್ತಿನಹೊಳೆ ನೀರನ್ನು ಕೋಲಾರಕ್ಕೆ ಹರಿಸುವ ಪಣತೊಟ್ಟಿರುವ ಸರ್ಕಾರ ಶತಾಯ ಗತಾಯ ಗುರಿ ಸಾಧನೆಗೆ ಮುಂದಾಗಿದೆ. ಈ ಸಂಬಂಧ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
2027ರ ಒಳಗಾಗಿ ಕೋಲಾರ ಭಾಗಕ್ಕೆ ಎತ್ತಿನ ಹೊಳೆ ನೀರನ್ನು ಹರಿಸಬೇಕು ಎಂಬುದು ನಮ್ಮ ಸರ್ಕಾರದ ಸಂಕಲ್ಪ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಯೋಜನೆಗೆ ಅರಣ್ಯ ಇಲಾಖೆಗೆ ಸಂಬಂಧಿತ ಸಮಸ್ಯೆಗಳು, ಭೂ ಸ್ವಾಧೀನ ಪ್ರಕ್ರಿಯೆ, ಬೈರಗೊಂಡಲು, ಲಕ್ಕೇನಹಳ್ಳಿಯಲ್ಲಿ ಸಮತೋಲಿತ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಹಾಗೂ ಆರ್ಥಿಕ ವಿಚಾರವಾಗಿ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಹೀಗಾಗಿ ಈ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ಈ ಯೋಜನೆಯಲ್ಲಿ ಮಾರ್ಪಾಡು ಮಾಡಿರುವ ಅಂಶಗಳು, ಸಚಿವರುಗಳ ಸಲಹೆಗಳನ್ನು ನೀಡಿದ್ದಾರೆ. ಇಲ್ಲಿ ಕೆಲವು ತಾಂತ್ರಿಕ ಅಂಶಗಳು ಕೂಡ ಇವೆ. ಎಲ್ಲವನ್ನು ಅಧ್ಯಯನ ಮಾಡಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಬೇರೆ ಯೋಜನೆಗಳು ವಿಳಂಬವಾದರೂ ಚಿಂತೆಯಿಲ್ಲ, ಎತ್ತಿನಹೊಳೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಸಿಎಂ ನನಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.














