ಯೋಗಾಭ್ಯಾಸದಿಂದ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಮಹಿಳೆಯರ ಫಲವತ್ತತೆ ಸಮಸ್ಯೆ ಕೂಡ ಕೆಲವೊಂದು ಯೋಗದ ಅಭ್ಯಾಸಗಳನ್ನು ಪ್ರಯತ್ನ ಪಡುವುದರಿಂದ ಪರಿಹಾರ ಮಾಡಿಕೊಳ್ಳ ಬಹುದಾಗಿದೆ. ಮಹಿಳೆಯರು ವಾರಕ್ಕೆ ಕನಿಷ್ಠ 45 ನಿಮಿಷ ಬಿಡುವು ಮಾಡಿಕೊಂಡು ಯೋಗಾಭ್ಯಾಸ ಟ್ರೈ ಮಾಡಿದರೆ, ಫಲವತ್ತತೆ ಸಮಸ್ಯೆ ಸಹಜವಾಗಿ ದೂರವಾಗುತ್ತದೆ. ದೇಹದಲ್ಲಿ ಬೊಜ್ಜಿನ ಸಮಸ್ಯೆ ಕೂಡ ದೂರವಾಗಿ ಅತ್ಯುತ್ತಮ ಹಾರ್ಮೋನುಗಳು ಹೆಚ್ಚಾಗಿ ಬಿಡುಗಡೆ ಆಗುತ್ತವೆ. ಹಾಗಾದರೆ ಯಾವೆಲ್ಲ ಯೋಗಾಭ್ಯಾಸಗಳು ಮಹಿಳೆಯರಿಗೆ ಫಲವತ್ತತೆ ವಿಚಾರದಲ್ಲಿ ವರದಾನವಾಗಿವೆ ಎಂಬುದರ ಮಾಹಿತಿ ಇಲ್ಲಿದೆ.
ಉಜ್ಜಾಯಿ ಪ್ರಾಣಯಾಮ
ಇದು ಒಂದು ಉಸಿರಾಡುವ ತಂತ್ರಗಾರಿಕೆ ಮೂಲಕ ಪ್ರಾರಂಭ ಮಾಡಬಹುದಾದ ಯೋಗಾಭ್ಯಾಸ ವಾಗಿದ್ದು, ಫಲವತ್ತತೆಗಾಗಿ ಮಹಿಳೆಯರು ಇದನ್ನು ಅನುಸರಿಸಬಹುದು. ದೇಹಕ್ಕೆ ವಿಶ್ರಾಂತಿ ನೀಡುವುದರ ಜೊತೆಗೆ ಗಮನವನ್ನು ಕೇಂದ್ರೀಕರಿಸಿ, ದೇಹವನ್ನು ಬಿಸಿಮಾಡಿ ರಕ್ತ ಸಂಚಾರವನ್ನು ಈ ಯೋಗ ಹೆಚ್ಚು ಮಾಡುತ್ತದೆ.
ಸೇತುಬಂದಾಸನ
ನಿಮ್ಮ ದೇಹದಲ್ಲಿ ಜನನಾಂಗಗಳ ಭಾಗಕ್ಕೆ ಹೆಚ್ಚಿನ ರಕ್ತ ಸಂಚಾರ ಉಂಟುಮಾಡಲು ಈ ಯೋಗ ಪ್ರಯೋಜನಕಾರಿಯಾಗಿದೆ. ಪ್ರಮುಖವಾಗಿ ಮಾನಸಿಕ ಒತ್ತಡ, ಮಾನಸಿಕ ಖಿನ್ನತೆ ಮತ್ತು ಆಯಾಸವನ್ನು ಮಹಿಳೆಯರು ಇದನ್ನು ಅನುಸರಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ವಿಪರೀತ ಕರಣಿ
ಪ್ರಮುಖವಾಗಿ ದೇಹದ ಕೆಳಭಾಗಕ್ಕೆ ನೋಡಬಹುದಾದ ಯೋಗಾಭ್ಯಾಸ ಇದಾಗಿದ್ದು, ಅಗತ್ಯದಂತೆ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ನೀಡುವಲ್ಲಿ ಇದು ನೆರವಾಗುತ್ತದೆ. ವಿಶೇಷವಾಗಿ ಬೆನ್ನಿನ ಭಾಗ ಹಾಗೂ ಸೊಂಟದ ಭಾಗವನ್ನು ವಿಸ್ತರಿಸುವಲ್ಲಿ ಇದು ನೆರವಾಗುತ್ತದೆ. ಲೈಂಗಿಕ ಕ್ರಿಯೆಯ ನಂತರ ಮಹಿಳೆಯರು ಈ ಯೋಗಾಭ್ಯಾಸವನ್ನು ಟ್ರೈ ಮಾಡುವುದರಿಂದ ಮಕ್ಕಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಾರ್ಜರಾಸನ
ಇದನ್ನು ಬೆಕ್ಕಿನ ಭಂಗಿ ಎಂದೂ ಸಹ ಕರೆಯುತ್ತಾರೆ. ಇದನ್ನು ಮಾಡುವುದರಿಂದ ಮಹಿಳೆಯರ ಬೆನ್ನಿನ ಭಾಗದಲ್ಲಿ ಬರುವಂತಹ ಬೆನ್ನುಹುರಿ, ಸೊಂಟದ ಭಾಗ, ಭುಜಗಳ ಭಾಗ ಬಿಸಿಯಾಗುತ್ತದೆ ಮತ್ತು ಈ ಭಾಗಗಳಲ್ಲಿ ರಕ್ತಸಂಚಾರ ಅಧಿಕಗೊಳ್ಳುತ್ತದೆ.
ಉತ್ತನಾಸನ
ಇದು ವಿಶೇಷವಾಗಿ ಮೆದುಳಿಗೆ ಸಂಬಂಧಪಟ್ಟ ಯೋಗಾಭ್ಯಾಸವಾಗಿದೆ. ಮೆದುಳಿನ ಜೀವಕೋಶಗಳಿಗೆ ಆಮ್ಲಜನಕವನ್ನು ಹೆಚ್ಚಾಗಿ ಪೂರೈಕೆ ಮಾಡುವುದರ ಜೊತೆಗೆ ಸೊಂಟದ ಭಾಗಕ್ಕೆ ಕೂಡ ರಕ್ತಸಂಚಾರ ವನ್ನು ಉತ್ತಮಪಡಿಸುತ್ತದೆ. ದೇಹದಲ್ಲಿ ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡಿ ಎಂಡೋ ಕ್ರೈನ್ ಹಾರ್ಮೋನ್ ಹೆಚ್ಚಾಗಿ ಬಿಡುಗಡೆಯಾಗುತ್ತದೆ.
ಬಾಲಾಸನ
ಇದು ದೇಹದ ಒತ್ತಡವನ್ನು ಮತ್ತು ಆಯಾಸವನ್ನು ದೂರ ಮಾಡುವ ಒಂದು ಯೋಗದ ಭಂಗಿಯಾಗಿದೆ. ಬೆನ್ನುಹುರಿಯನ್ನು ವಿಸ್ತಾರ ಮಾಡುವುದರ ಜೊತೆಗೆ ಸೊಂಟದ ಭಾಗ ಹಾಗೂ ಭುಜದ ಭಾಗವನ್ನು ಆರೋಗ್ಯಕರವಾಗಿ ಇರಿಸುತ್ತದೆ.
ಭುಜಂಗಾಸನ
ವಿಶೇಷವಾಗಿ ಈ ಯೋಗದ ಭಂಗಿ ಸೊಂಟದ ಭಾಗಕ್ಕೆ ಹೆಚ್ಚಿನ ರಕ್ತಸಂಚಾರವನ್ನು ಒದಗಿಸುವುದರ ಜೊತೆಗೆ ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಕಾಪಾಡುತ್ತದೆ. ಬೆನ್ನಿನ ಭಾಗವನ್ನು ವಿಸ್ತರ ಮಾಡುವುದರಿಂದ ಇದು ಸಾಧ್ಯವಾಗುತ್ತದೆ.
ಬದ್ಧಕೋನಾಸನ
ಸೊಂಟದ ಭಾಗ ಹಾಗೂ ಒಳತೊಡೆಗಳ ಭಾಗದ ಫ್ಲೆಕ್ಸಿಬಿಲಿಟಿ ಅತ್ಯುತ್ತಮ ಪಡಿಸುವ ಯೋಗದ ಭಂಗಿ ಇದಾಗಿದೆ. ದೇಹದಲ್ಲಿ ವಿಷಕಾರಿ ಅಂಶಗಳನ್ನು ಹೋಗಲಾಡಿಸುವ ಜೊತೆಗೆ ಒತ್ತಡವನ್ನು ಸಹ ಇದು ಕಡಿಮೆ ಮಾಡುತ್ತದೆ. ಗರ್ಭಾವಸ್ಥೆಯ ಕೊನೆಯ ಹಂತದವರೆಗೂ ಕೂಡ ಮಹಿಳೆಯರು ಇದನ್ನು ಮಾಡಬಹುದು. ಸುಲಭವಾಗಿ ಹೆರಿಗೆಯಾಗಲು ಇದು ಸಹಾಯವಾಗುತ್ತದೆ.