ಮೈಸೂರು: ನೀವು ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರಗೆ ಬರುತ್ತೇನೆ ಎಂದು ಕ್ಷೇತ್ರದ ಜನತೆಗೆ ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಳೆದ ಒಂಭತ್ತು ವರ್ಷದಿಂದ ನಮಗೆ ಒಳ್ಳೆಯ ಸ್ವಾಗತ ಕೋರಿದ್ದೀರಾ. ಮನೆ ಮಗನಾಗಿ ಸಹೋದರನಾಗಿ ನನ್ನ ಮೇಲೆ ಪ್ರೀತಿ ತೋರಿದ್ದೀರಾ. ಇದೆ ರೀತಿಯ ಪ್ರೀತಿ ವಿಶ್ವಾಸ ಮುಂದೆಯೂ ನಿಮ್ಮಿಂದ ನನಗೆ ಬೇಕಿದೆ. ನನ್ನ ತತ್ವ ಸಿದ್ದಾಂತಗಳು ಬಿಜೆಪಿ ಪಕ್ಷಕ್ಕೆ ಹತ್ತಿರವಿದೆ. ನಮ್ಮ ಆಲೋಚನೆ ಮತ್ತೆ ಬಿಜೆಪಿ ಆಲೋಚನೆ ಒಂದೇ ತರ ಇದೆ. ಈ ಕಾರಣಕ್ಕಾಗಿ ನಾನು ಬಿಜೆಪಿಯನ್ನ ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದರು.
ನಮ್ಮ ತಂದೆ ನಾಲ್ಕು ಬಾರಿ ಸಂಸದರಾಗಿದ್ದರು. ನಮಗೆ ಎಲ್ಲ ಪಕ್ಷದವರೊಂದಿಗೆ ಸಂಬಂಧ ಇದೆ. ನನ್ನ ಪರಿಕಲ್ಪನೆಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಇದೆ. ಜನರಿಗೆ ಅರಮನೆ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ನಾನು ಸಾಮಾನ್ಯ ಎಂಪಿ ರೀತಿ ಕೆಲಸ ಮಾಡುತ್ತೇನೆ. ಆಧುನಿಕ ತಂತ್ರಜ್ಞಾನದ ಮೂಲಕ ಸಂಪರ್ಕ ಇಟ್ಟುಕೊಳ್ಳಬಹುದು. ನೀವು ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರಗೆ ಬರುತ್ತೇನೆ. ತುಂಬಾ ದೊಡ್ಡ ನಿರೀಕ್ಷೆ ಇದೆ ಅಂತ ಅನ್ನಿಸುತ್ತಿಲ್ಲ. ನಾನು ರಾಜ ಅಂತ ಹೇಳಿಲ್ಲ. ಅರಮನೆಗೆ ಒಂದು ಪರಂಪರೆ ಇದೆ. ಅದನ್ನು ಹೊರತುಪಡಿಸಿ ನಾನು ಸಾಮಾನ್ಯನಾಗಿ ಇರುತ್ತೇನೆ. ನನ್ನನ್ನು ಸಂಸದ, ಪ್ರತಿನಿಧಿ ಏನು ಬೇಕಾದರೂ ಕರೆಯಿರಿ. ಇನ್ನು ಬೆಂಗಳೂರು ಅರಮನೆ ವಿಚಾರ ಕಾನೂನಾತ್ಮಕವಾಗಿ ನಡೆಯುತ್ತೆ ಎಂದು ಯದುವೀರ್ ತಿಳಿಸಿದರು.
ನನ್ನ ತಾಯಿ ನನ್ನ ಪರವಾಗಿ ಪ್ರಚಾರಕ್ಕೆ ಬರುವ ಅಗತ್ಯ ಇಲ್ಲ. ತಾಯಿ ಆಶೀರ್ವಾದದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಅವರು ನನ್ನ ಪರವಾಗಿ ಹೇಳಿಕೆ ಕೊಡಬೇಕೆಂಬುದು ಏನು ಇಲ್ಲ. ಅವರ ಸಹಕಾರ ನನ್ನ ಮೇಲೆ ಸದಾ ಇರುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಹೇಳಿದರು.