ಮನೆ ಅಪರಾಧ ನೀನು ಮದುವೆ ಆಗು, ಆದರೆ ನನ್ನ ಜೊತೆ ಡೇಟಿಂಗ್ ಮಾಡು : ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು...

ನೀನು ಮದುವೆ ಆಗು, ಆದರೆ ನನ್ನ ಜೊತೆ ಡೇಟಿಂಗ್ ಮಾಡು : ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ!

0

ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ವಿದ್ಯೆ ಹೇಳುವ ಗುರುಗಳು ಎನಿಸಿಕೊಂಡವರು ಹೇಸಿಗೆಯ ಕೃತ್ಯ ಎಸಗುತ್ತಿದ್ದೂ, ಇದೀಗ ದಾವಣಗೆರೆಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ನೀನು ಮದುವೆ ಆಗು ಆದರೆ ನನ್ನ ಜೊತೆ ಡೇಟಿಂಗ್ ಮಾಡು ಎಂದು ಅಶ್ಲೀಲವಾಗಿ ಮೆಸೇಜ್ ಕಳುಹಿಸಿರುವ ಘಟನೆ ವರದಿಯಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್ ಕಳಿಸುವ ಮೂಲಕ ಲೈಂಗಿಕವಾಗಿ ಪೀಡಿಸಿದ್ದಾನೆ ಎಂಬ ಗಂಭೀರ ಆರೋಪ ಹೊರಸಲಾಗಿದ್ದು, ಈ ಘಟನೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆರೋಪಿತನನ್ನು ಲಿಂಗೇಶ್ವರಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮುರಳಿ ಎಂಬಾತನೆಂದು ಗುರುತಿಸಲಾಗಿದೆ. ಈತನ ವಿರುದ್ಧ ಕಾಲೇಜಿನ ಬಿಎಸ್ಸಿ ವಿಭಾಗದ ವಿದ್ಯಾರ್ಥಿನಿ ಶಿಕ್ಷಕರ ಅಸಭ್ಯ ಮೆಸೇಜ್‌ಗಳ ಬಗ್ಗೆ ಗಂಭೀರವಾದ ದೂರು ನೀಡಿದ್ದಾಳೆ.

ಮುರಳಿ ಎಂಬ ಉಪನ್ಯಾಸಕ ವಿದ್ಯಾರ್ಥಿನಿಗೆ “ಐ ಲವ್ ಯು” ಎಂದು ನಿರಂತರವಾಗಿ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಎಂದು ಹೇಳಲಾಗಿದ್ದು, ವಿದ್ಯಾರ್ಥಿನಿ ತನ್ನ ಮದುವೆ ನಿಶ್ಚಿತವಾಗಿದೆ ಎಂದು ತಿಳಿಸಿದ್ದರೂ ಕೂಡ, “ನೀನು ಮದುವೆ ಆಗು, ಆದರೆ ನನ್ನ ಜೊತೆ ಡೇಟಿಂಗ್ ಮಾಡು” ಎಂಬ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎನ್ನಲಾಗಿದೆ.

ವಿದ್ಯಾರ್ಥಿನಿ ತಿರಸ್ಕಾರ ವ್ಯಕ್ತಪಡಿಸಿದಾಗಲೂ, “ಡೇಟಿಂಗ್ ಅಂದ್ರೆ ಏನು ಗೊತ್ತಿಲ್ಲ ಅಲ್ವಾ? ಮದುವೆ ಆದ್ಮೇಲೆ ಗೊತ್ತಾಗುತ್ತೆ” ಎಂದು ಮತ್ತಷ್ಟು ಅಸಭ್ಯವಾಗಿ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ರೀತಿಯ ದುರ್ವರ್ತನೆಗಳು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ಗಂಭೀರ ಶಂಕೆಗಳನ್ನು ಹುಟ್ಟಿಸುತ್ತಿವೆ.

ಈ ಘಟನೆ ಬಹಿರಂಗವಾದ ನಂತರ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ಮಾಡಿದರು. ವಿದ್ಯಾರ್ಥಿನಿಯ ಪರವಾಗಿ ಕಾಲೇಜು ವಿದ್ಯಾರ್ಥಿಗಳು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ವಿದ್ಯಾರ್ಥಿನಿಯ ಹೇಳಿಕೆ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.