ಮನೆ ಕಾನೂನು ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ಆಗಲ್ಲ: ನಟ ದರ್ಶನ್ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ಆಗಲ್ಲ: ನಟ ದರ್ಶನ್ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌, ಮನೆ ಊಟ ಕೋರಿ ಸಲ್ಲಿಸಿರುವ ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ.

Join Our Whatsapp Group

ದರ್ಶನ್ ಪರ ವಕೀಲರು ಹಾಗೂ ಸರ್ಕಾರಿ ಪರ ಎಸ್‌ಪಿಪಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.

ಜುಲೈ 22ರಂದು ದರ್ಶನ್ ಪರ ವಕೀಲ ವಕೀಲ ರಾಘವೇಂದ್ರ ವಾದ ಮಂಡಿಸಿ, ದರ್ಶನ್‌ಗೆ ಜೈಲು ಊಟ ಜೀರ್ಣವಾಗುತ್ತಿಲ್ಲ, ಅತಿಸಾರವಾಗುತ್ತಿದೆ. ಹೀಗಾಗಿ ಖಾಸಗಿ ಊಟ, ಹಾಸಿಗೆ ಕೆಳಲಾಗುತ್ತಿದೆ. ವಿಚಾರಣಾಧೀನ ಕೈದಿಗೆ ಮನೆಯೂಟ ಪಡೆಯಲು ಅವಕಾಶವಿದೆ. ತನಿಖೆ ಪೂರ್ಣವಾಗದ ಸಂಧರ್ಬದಲ್ಲಿ ಮನೆ ಊಟ ನೀಡಲು ಅವಕಾಶವಿದೆ. ಕರ್ನಾಟಕ ಕಾರಾಗೃಹ ಕಾಯ್ದೆ ಪ್ರಕಾರ ಸಿವಿಲ್ ಕೈದಿ ಹಾಗೂ ವಿಚಾರಣಾಧೀನ ಕೈದಿಗೆ ಸ್ವಂತ ಹಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಅಧಿಕಾರಿಗಳೇ ರೇಷನ್ ನೀಡಬೇಕು. ಸೆಂಟ್ರಲ್ ಕಿಚನ್‌ನಲ್ಲಿ ಅಡುಗೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಮನವಿ ಸಲ್ಲಿಸಿದ್ದರು.

ದರ್ಶನ್ ಒಬ್ಬ ಸೆಲೆಬ್ರಿಟಿ ಅಗಿರುವುದರಿಂದ ಪ್ರಚಾರ ಸಿಗುತ್ತದೆ. ಆಗಾಗಿಯೇ ಜೈಲು ಅಧಿಕಾರಿಗಳು ಮನೆ ಊಟಕ್ಕೆ ಅವಕಾಶ ನೀಡುತ್ತಿಲ್ಲ. ಆರೋಪ ಸಾಬೀತಾಗುವವರೆಗೂ ಮುಗ್ಧನೆಂದು ಪರಿಗಣಿಸಿ ಮನೆ ಊಟ, ಹಾಸಿಗೆ ಒದಗಿಸಬೇಕೆಂದು ಹೇಳಿದ್ದರು.

ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಆರಂಭಿಸಿ, ಜೈಲು ಊಟ ಜೀರ್ಣವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೆಡಿಕಲ್ ರಿಪೋರ್ಟ್ ಕೋರ್ಟ್‌ಗೆ ಸಲ್ಲಿಸಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸುವಾಗ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅವರಿಗೆ ಆರ್ಥೋಪೆಡಿಕ್ ಸಮಸ್ಯೆ ಇದೆ. ಅದಕ್ಕೆ ಮೊದಲು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದನ್ನ ಮುಂದುವರಿಸಲು ಸೂಚನೆ ನೀಡಿದ್ದರು. ಈಗ ಡಯಟ್ ಪುಡ್ ಕೇಳಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಜೈಲು ಮ್ಯಾನ್ಯುವಲ್ ಪ್ರಕಾರ ಏನೇನು ನೀಡಬೇಕೋ ಅದನ್ನು ನೀಡುತ್ತಿದ್ದೇವೆ. ಜೈಲು ಕೈಪಿಡಿಯಲ್ಲಿ ಮನೆ ಊಟ ಎಂಬ ಪದವೇ ಇಲ್ಲ. ಹುಷಾರಿಲ್ಲದ ವೇಳೆ ಎಕ್ಟ್ರಾ ಡಯಟ್ 30 ದಿನ ನೀಡಬಹುದು. ವಾರದಲ್ಲಿ ಒಂದು ದಿನ ಮೊಟ್ಟೆ ಹಾಗೂ ಬಾಳೆ ಹಣ್ಣು ನೀಡಬಹುದು. ಜ್ವರ ಇದ್ದಾಗ ಬಿಸಿ ನೀರು ನೀಡುತ್ತಾರೆ. ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ನಿಯಮದಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದ್ದರು.

ಸದ್ಯ ದರ್ಶನ್ ಮೆಡಿಕಲ್ ರಿಪೋರ್ಟ್‌ನಲ್ಲಿ ಬೆಡ್ ರೆಸ್ಟ್ ಬೇಕು ಎಂದಿದೆ. ಜೈಲು ವೈದ್ಯಾಧಿಕಾರಿಗಳು ಅಗತ್ಯವಿದ್ದರೆ ವಿಶೇಷ ಆಹಾರವನ್ನು ನೀಡಬಹುದು. ಜೈಲು ನಿಯಮ 728 ರಲ್ಲಿ ಬಟ್ಟೆ, ಹಾಸಿಗೆ ನೀಡುವ ನಿಯಮವಿದೆ. ಇದು ಕೊಲೆ ಆರೋಪಿಯನ್ನು ಹೊರತು ಪಡಿಸಿ ಬೇರೆ ಕೈದಿಗಳಿಗೆ ಅನ್ವಯವಾಗುತ್ತದೆ. ದರ್ಶನ್ ನಾನು ನಿತ್ಯ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದೆ. ಹೀಗಾಗಿ ಜೈಲಿನಲ್ಲಿ ನೀಡುವ ಊಟದ ಜೊತೆಗೆ ಎಕ್ಟ್ರಾ ಪ್ರೋಟಿನ್ ನೀಡಬೇಕೆಂದು ಮಾನವಿ ಮಾಡಿದ್ದಾರೆ. ಪ್ರತಿ ಭಾರಿ ನಾನು ಮನೆಯಲ್ಲಿ ವ್ಯಾಯಾಮ ಮಾಡ್ತಿದ್ದೆ. ಪ್ರೋಟಿನ್ ಆಹಾರ ತಿನ್ನುತ್ತಿದ್ದೆ. ಹೀಗಾಗಿ ಮನೆ ಊಟ ಬೇಕು ಎಂದಿದ್ದಾರೆ. ದರ್ಶನ್ ಬಂಧನವಾಗೋವರೆಗೂ ವ್ಯಾಯಾಮ ಮಾಡಿಕೊಂಡಿದ್ದರು, ಈಗ ಬಂಧಿಯಾಗಿದ್ದಾರೆ. ಜೈಲಿನಲ್ಲಿದ್ದಾಗಲೂ ಎಲ್ಲಾ ಸೌಲಭ್ಯಗಳು ಬೇಕೆಂದರೆ ಹೇಗೆ ಎಂದು ಪ್ರಶ್ನಿಸಿದ್ದರು.