ಮನೆ ರಾಜ್ಯ ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತದೆಂದು ಕಾದು ನೋಡಿ: ಸಿಎಂ ಇಬ್ರಾಹಿಂ

ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತದೆಂದು ಕಾದು ನೋಡಿ: ಸಿಎಂ ಇಬ್ರಾಹಿಂ

0

ಬೆಂಗಳೂರು: ಅವರಿಗೆ ನನ್ನನ್ನು ತೆಗೆಯುವ ಅಧಿಕಾರ ಇಲ್ಲ. ಕಾರ್ಯಕಾರಿ ಸಮಿತಿಯ 3/2 ನೇ ಸದಸ್ಯರ ಅನುಮತಿ ಪಡೆದು ಮೊದಲು ನನಗೆ ನೋಟಿಸ್ ಕೊಡಬೇಕು. ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತದೆ ಅಂತ ಕಾದು ನೋಡಿ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಸಿ.ಎಂ.ಇಬ್ರಾಹಿಂ ವಾಗ್ದಾಳಿ ಮಾಡಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳ ವಿಸರ್ಜನೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಚುನಾವಣಾ ಆಯೋಗದಲ್ಲಿ ನಿಮ್ಮ ನಿರ್ಧಾರ ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ ಎಂಬ ಭಾವನೆ ನನ್ನಲ್ಲಿ ಇಲ್ಲ. ಇನ್ನೂ ಡೈವೋರ್ಸ್ ಆಗಿಲ್ಲ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ ಪುತ್ರ ವ್ಯಾಮೋಹ ಇರುವುದು ಸಾಬೀತಾಗಿದೆ. ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನ ಅಂದುಕೊಂಡಿದ್ದೆ. ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ. ಮಹಾಭಾರತದಲ್ಲಿ ಆದ ಹಾಗೆ ರಾಜ್ಯದಲ್ಲಿ ಜನತಾದಳಕ್ಕೂ ಆಗುತ್ತದೆ ಎಂದರು.

ಇವತ್ತಿನ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಸಭೆ ಬಗ್ಗೆ ನನಗೆ ಗೊತ್ತೂ ಇಲ್ಲ. ಕಂಡೋರ ಮಕ್ಕಳು ಸಿಕ್ಕಿದ್ದೇವೆ ಅಂತ ಹೀಗೆಲ್ಲಾ ಮಾಡುವುದು ಸರಿಯಲ್ಲ ಗೌಡ್ರೇ. ನನಗೆ ಅಧಿಕಾರದ ಆಸೆ ಇಲ್ಲ. ಜೆಡಿಎಸ್ ಕುಟುಂಬದ ಸ್ವತ್ತು ಅಂತ ತೋರಿಸಿಬಿಟ್ಟಿರಿ. ಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ? ನಾನು ಒಬ್ಬ ಹಿರಿಯ, ಪರಿಷತ್ ಸದಸ್ಯ ಸ್ಥಾನ ಬಿಟ್ಟು ಬಂದಿದ್ದೇನೆ. ನನ್ನ ಜೊತೆ ಮಾತಾಡಬೇಕು ಅಂತ ಅನ್ನಿಸಲಿಲ್ವಾ? ರಾತ್ರಿ ಹಗಲು ಓಡಾಡಿ ಅವರ ಮಗನನ್ನು ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಬೈಯುತ್ತಿಲ್ಲ ಅಂತ ದೇವೇಗೌಡರಿಗೆ ಬೇಸರ ಇದೆ. ಸುಮ್ಮ ಸುಮ್ಮನೆ ನಾನ್ಯಾಕೆ ಸಿದ್ದರಾಮಯ್ಯರನ್ನು ಬೈಯಲಿ? ಸಿದ್ದರಾಮಯ್ಯ ಜೊತೆ ಯಾವುದೇ ವೈಷಮ್ಯ ಇಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡುತ್ತಿದ್ದಾರೆ. ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನ್ನಿಸಿಲ್ಲ. ನನ್ನ ಹೋರಾಟ ಶುರುವಾಗಿದೆ ಎಂದು ಹೇಳಿದ್ದಾರೆ.

ಹಂಗಾಮಿ ಅಧ್ಯಕ್ಷರು ಅಂತಾ ಯಾವ ಆಧಾರದಲ್ಲಿ ಮಾಡಿದ್ದೀರಿ? ದೇವರು ಮತ್ತು ಜನ ನನ್ನ ಕೈಹಿಡಿಯುತ್ತಾರೆ. ಎಲ್ಲವನ್ನೂ ಹೊರಗೆ ತಂದರೆ ಒಳ್ಳೆಯದಲ್ಲ, ವಿಸರ್ಜನೆ ತಪ್ಪು ಎಂದು ನಾನು ಹೋಗದೇ ಇದ್ದರೆ ಚನ್ನಪಟ್ಟಣದಲ್ಲಿ ಹೆಚ್ ​ಡಿ ಕುಮಾರಸ್ವಾಮಿ ಗೆಲ್ಲುತ್ತಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ.

ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ನೀವು. ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಾನು ಹಾಸನ, ಮಂಡ್ಯ, ಹೊಳೆನರಸೀಪುರಕ್ಕೆ ಹೋಗಿ ಸಭೆ ಮಾಡುತ್ತೇನೆ. ಆದೇಶ ವಾಪಸ್ ಪಡೆದು ಪಕ್ಷದ ಸಭೆ ಕರೆಯಿರಿ ಎಂದು ಕಿಡಿಕಾರಿದ್ದಾರೆ.

ಜನತಾದಳ ವಿಸರ್ಜನೆ ಮಾಡಲು ಆಗುವುದೇ ಇಲ್ಲ. ನಮ್ಮದೇ ಒರಿಜಿನಲ್ ಜನತಾದಳ ಮೆಜಾರಿಟಿ ಶಾಸಕರು ನನ್ನ ಜೊತೆ ಇದ್ದಾರೆ. ಮುಂದಿನ ನಡೆಯೇ ಜನತಾದಳ. ಕಾನೂನು ಹೋರಾಟ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಶಾಸಕರನ್ನು ಹಣ ಬಲ ತೋರಿಸಿ ಹೆದರಿಸಿ ಇಟ್ಟುಕೊಂಡಿದ್ದಾರೆ ಎಂದರು.