ಮನೆ ಅಪರಾಧ ಬೆಂಗಳೂರಿನಲ್ಲಿ ಯುವತಿ ಅಪಹರಿಸಿ ಅತ್ಯಾಚಾರ: ರ‍್ಯಾಪಿಡೊ ಬೈಕ್ ಸವಾರ ಸೇರಿ ಮೂವರ ಬಂಧನ

ಬೆಂಗಳೂರಿನಲ್ಲಿ ಯುವತಿ ಅಪಹರಿಸಿ ಅತ್ಯಾಚಾರ: ರ‍್ಯಾಪಿಡೊ ಬೈಕ್ ಸವಾರ ಸೇರಿ ಮೂವರ ಬಂಧನ

0

ಬೆಂಗಳೂರು: ಮೊಬೈಲ್ ಆ್ಯಪ್ ಆಧರಿತ ‘ರ‍್ಯಾಪಿಡೊ’ ಬೈಕ್‌’ನಲ್ಲಿ ಹೊರಟಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ರ‍್ಯಾಪಿಡೊ ಬೈಕ್ ಸವಾರ ಸೇರಿ ಮೂವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಶಹಾಬುದ್ದೀನ್ (26), ಅಖ್ತರ್ (24) ಬಂಧಿತರು. ಇವರಿಬ್ಬರ ಕೃತ್ಯಕ್ಕೆ ಸಹಕರಿಸಿ, ಅತ್ಯಾಚಾರ ಸಂಗತಿ ಮುಚ್ಚಿಟ್ಟಿದ್ದ ಯುವತಿಯನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ.

ಕೇರಳದ 22 ವರ್ಷದ ಯುವತಿ, ಕೆಲಸಕ್ಕೆಂದು ನಗರಕ್ಕೆ ಬಂದಿದ್ದರು. ಬಿಟಿಎಂ ಲೇಔಟ್‌’ನ ಕಂಪನಿಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ವಾಸವಿದ್ದರು.

ಗುರುವಾರ (ನ. 24) ರಾತ್ರಿ ಕೆಲಸ ಮುಗಿಸಿ ಬಿಟಿಎಂ ಲೇಔಟ್‌’ನಲ್ಲಿರುವ ಸ್ನೇಹಿತರೊಬ್ಬರ ಮನೆಗೆ ಯುವತಿ ಹೋಗಿದ್ದರು. ಅಲ್ಲಿ ಸ್ನೇಹಿತರೆಲ್ಲರೂ ಪಾರ್ಟಿ ಮಾಡಿದ್ದರು. ಯುವತಿ, ಮದ್ಯ ಕುಡಿದಿದ್ದರೆಂದು ಗೊತ್ತಾಗಿದೆ. ಪಾನಮತ್ತ ಸ್ಥಿತಿಯಲ್ಲೇ ನೀಲಾದ್ರಿನಗರದಲ್ಲಿರುವ ತಮ್ಮ ಮನೆಗೆ ಹೊರಟಲು ಸಜ್ಜಾಗಿದ್ದ ಯುವತಿ, ರ‍್ಯಾಪಿಡೊ ಬೈಕ್ ಕಾಯ್ದಿರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೈಕ್ ಚಾಲಕನಾಗಿದ್ದ ಶಹಾಬುದ್ದೀನ್, ಸ್ಥಳಕ್ಕೆ ಬಂದು ಯುವತಿಯನ್ನು ಹತ್ತಿಸಿಕೊಂಡು ಅಲ್ಲಿಂದ ಹೊರಟಿದ್ದ. ನೀಲಾದ್ರಿನಗರದ ನಿಗದಿತ ಸ್ಥಳದಲ್ಲಿ ಬೈಕ್ ನಿಲ್ಲಿಸಿದ ಶಹಾಬುದ್ದೀನ್, ಸ್ನೇಹಿತ ಅಖ್ತರ್ ಜೊತೆ ಸೇರಿ ಯುವತಿಯನ್ನು ಅಪಹರಿಸಿಕೊಂಡು ಕೊಠಡಿಯೊಂದಕ್ಕೆ ಕರೆದೊಯ್ದಿದ್ದ. ಅದೇ ಕೊಠಡಿಯಲ್ಲಿ ಇಬ್ಬರೂ ಸೇರಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಇದಾದ ನಂತರ, ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಗತಿ ಗೊತ್ತಿದ್ದರೂ ಆರೋಪಿತ ಯುವತಿ ಸುಮ್ಮನಿದ್ದರು. ಅಸ್ವಸ್ಥಗೊಂಡಿದ್ದ ಯುವತಿ, ಬೇರೆ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು.

ಅತ್ಯಾಚಾರ ಆಗಿರುವುದಾಗಿ ವೈದ್ಯರು ಹೇಳಿದ್ದರು. ಇದಾದ ನಂತರ ಯುವತಿ ಠಾಣೆಗೆ ಬಂದು ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.