ನಳಂದ: 25 ವರ್ಷದ ಅಪರಿಚಿತ ಯುವತಿಯನ್ನು ಕ್ರೂರವಾಗಿ ಹಿಂಸಿಸಿ ರಸ್ತೆ ಬದಿಯಲ್ಲಿ ಶವ ಬಿಸಾಡಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.
ಆಕೆಯ ಕೊಲೆಗೂ ಮುನ್ನ ಚಿತ್ರಹಿಂಸೆ ನೀಡಲಾಗಿದ್ದು, ಕಾಲಿನ ಪಾದಗಳಲ್ಲಿ 10 ಮೊಳೆಗಳು ಕಂಡು ಬಂದಿವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಲ್ಲಿನ ಚಾಂಡಿ ಪೊಲೀಸ್ ಠಾಣೆ ಪ್ರದೇಶದ ಬಹದ್ದೂರ್ಪುರ ಗ್ರಾಮದ ರಸ್ತೆ ಬದಿಯ ಜಮೀನಿನಲ್ಲಿ 25 ವರ್ಷದ ಅಪರಿಚಿತ ಯುವತಿಯ ಮೃತದೇಹ ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಕ್ರೂರತೆಯು ಬಯಲಾಗಿದೆ.
ಎರಡೂ ಪಾದಗಳಲ್ಲಿ 10 ಮೊಳೆ: ಯುವತಿಯ ಶವ ವಶಕ್ಕೆ ಪಡೆದ ಪೊಲೀಸರು ತಪಾಸಣೆ ನಡೆಸಿದಾಗ, ಆಕೆಯ ಹತ್ಯೆಗೂ ಮೊದಲು ಚಿತ್ರಹಿಂಸೆ ನೀಡಿದ ಬಗ್ಗೆ ಗೊತ್ತಾಗಿದೆ. ಅಮಾನವೀಯವಾಗಿ ನಡೆಸಿಕೊಂಡು, ಯುವತಿಯ ಎರಡೂ ಪಾದಗಳಿಗೆ 10 ಮೊಳೆಗಳನ್ನು ಜಡಿಯಲಾಗಿದೆ. ಇದು ದುಷ್ಕರ್ಮಿಗಳ ಅಟ್ಟಹಾಸವನ್ನು ತೋರಿಸುತ್ತದೆ. ದೇಹದ ವಿವಿಧೆಡೆ ಗಾಯಗಳಾಗಿವೆ. ಆಕೆಯನ್ನ ಹತ್ಯೆ ಮಾಡಿದ ಬಳಿಕ ಶವವನ್ನು ಗ್ರಾಮದ ರಸ್ತೆ ಬದಿಯ ಜಮೀನಿನಲ್ಲಿ ಬಿಸಾಡಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ತನಿಖಾಧಿಕಾರಿ ಸುಮನ್ ಕುಮಾರ್, ಯುವತಿಯ ಎಡಗೈಯಲ್ಲಿ ಬ್ಯಾಂಡೇಜ್ ಪತ್ತೆಯಾಗಿದೆ. ಶವ ಗುರುತಿಸಲು ಪ್ರಯತ್ನ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಗುರುತು ಪತ್ತೆ ಆಗುವವರೆಗೆ ಶವಾಗಾರದಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ಯುವತಿಯನ್ನು ಏಕೆ ಕೊಲೆ ಮಾಡಲಾಗಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ ಎಂದರು.
ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಪಾದಗಳಿಗೆ 10 ಮೊಳೆಗಳನ್ನು ಜಡಿಯಲಾಗಿದೆ. ಅಟ್ಟಹಾಸ ಮೆರೆದ ಕ್ರೂರಿಗಳು ಆಕೆಯ ಕೊಲೆಯ ನಂತರ ಶವವನ್ನು ರಸ್ತೆ ಬದಿ ಎಸೆದು ಹೋಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.














