ಮೈಸೂರು(Mysuru): ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಯುವತಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಆಶಿಕ್ (28) ಬಂಧಿತ ಆರೋಪಿ.
ಮೃತ ಅಪೂರ್ವ ಶೆಟ್ಟಿಯನ್ನು ಆಶಿಕ್ ಪ್ರೀತಿಸುತ್ತಿದ್ದ. ಅಪೂರ್ವ ಶೆಟ್ಟಿ ವಿಜಯನಗರದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಳು. ಈ ನಡುವೆ ಈ ಇಬ್ಬರು ಪ್ರೇಮಿಗಳು ಎರಡು ದಿನಗಳ ಕಾಲ ನಗರದ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಇದೇ ವೇಳೆ ಇಬ್ಬರ ನಡುವೆ ಗಲಾಟೆ ನಡೆದು, ಅಪೂರ್ವ ಶೆಟ್ಟಿ ಕೊಲೆಯಲ್ಲಿ ಅಂತ್ಯವಾಗಿದೆ.
ಅಪೂರ್ವ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆಶಿಕ್ ಬಳಿಕ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದ. ನಂತರ ಹೋಟೆಲ್ ನಿಂದ ಹೊರಟಿದ್ದ ಆಶಿಕ್ ಕೂಡ ಪಿರಿಯಾಪಟ್ಟಣದ ಕಂಪ್ಲಾಪುರ ಬಳಿ ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿದ್ದನು. ಈ ನಡುವೆ ಆಶಿಕ್ ನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆತನಿದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಈ ಸಂಬಂಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














