ಮೈಸೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ತಡೆಯಲು ಖಾಕಿಪಡೆ ಸಜ್ಜಾಗಿದೆ. ಇದೀಗ ಇದಕ್ಕೂ ಮುನ್ನವೇ ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ನಲ್ಲಿ ಯುವಕರು ಪುಂಡಾಟ ಮೆರೆದಿರುವ ಘಟನೆ ನಡೆದಿದೆ.
ಹಾಡಹಗಲೇ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಪುಂಡರು ಮದ್ಯಪಾನ ಸೇವನೆ ಮಾಡಿದ್ದು, ಚಾಮುಂಡಿ ಬೆಟ್ಟ ಏರಿ ಬರುವ ವಾಯುವಿಹಾರಿಗಳಿಗೆ ಇರುಸು ಮುರುಸು ಉಂಟು ಮಾಡಿದ್ದಾರೆ. ರಸ್ತೆಯಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡಿದ್ದು, ಈ ಅನಾಚಾರವನ್ನು ವಿಡಿಯೋ ಮಾಡಲು ಹೋದ ಮಾಧ್ಯಮದವರ ಮೇಲೂ ಪುಂಡರು ಹಲ್ಲೆ ಮಾಡಲು ಮುಂದಾದರು ಎನ್ನಲಾಗಿದೆ.
ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳದಲ್ಲಿ ಮದ್ಯ ವ್ಯಸನಿಗಳಿಂದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದ್ದು, ವೃದ್ಧರು ಹಾಗೂ ಮಹಿಳೆಯರು ಪುಂಡರಿಗೆ ಹಿಡಿಶಾಪ ಹಾಕಿದ್ದಾರೆ.














