ನವದೆಹಲಿ : ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಭಾರತದ ವಿಶ್ವಕಪ್ ವಿಜೇತ ನಾಯಕರುಗಳಾದ ಮಹೇಂದ್ರ ಧೋನಿ ಹಾಗೂ ಕಪಿಲ್ ದೇವ್ ಅವರಿಗೆ ಕ್ಷಮೆಯಾಚಿಸಿದ್ದಾರೆ. ಇತ್ತೀಚಿಗೆ ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಅವರು, ತಮ್ಮ ತಂದೆಯ ಹೇಳಿಕೆಗಳಿಗೆ ಸಂಬಂಧಿಸಿದಂತೆ ಧೋನಿ ಹಾಗೂ ಕಪಿಲ್ ದೇವ್ಗೆ ಕ್ಷಮೆ ಕೇಳಿದ್ದಾರೆ.
ನನ್ನ ತಂದೆ ಮಾತುಗಳಿಗಾಗಿ ನಾನು ಇಬ್ಬರಲ್ಲೂ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಆ ಮಾತುಗಳು ನನ್ನದಲ್ಲ. ಇದು ನಿಮ್ಮಬ್ಬರಿಗೂ ತಿಳಿದಿದೆ. ಭಾರತದ ವಿಶ್ವಕಪ್ ವಿಜೇತ ನಾಯಕರುಗಳಾದ ನೀವಿಬ್ಬರು ಕ್ರಿಕೆಟಿಗರಾಗಿ ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಯುವರಾಜ್ ತಂದೆ ಯೋಗರಾಜ್ ಸಿಂಗ್ ಹಲವು ಧೋನಿ ಹಾಗೂ ಕಪಿಲ್ ವಿರುದ್ಧ ತೀಕ್ಷ್ಯ ಮಾತುಗಳಿಂದ ಟೀಕೆ ವ್ಯಕ್ತಪಡಿಸಿದ್ದರು. ಯುವರಾಜ್ ಸಿಂಗ್ ವೃತ್ತಿ ಜೀವನ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕೆಲ ಆಟಗಾರರು ಬೆಂಬಲ ನೀಡಿರಲಿಲ್ಲ. ಯುವರಾಜ್ ಸಿಂಗ್ ಬೆನ್ನಿಗೆ ಸಾಕಷ್ಟು ಮಂದಿ ಚೂರಿ ಹಾಕಿದ್ದಾರೆ. ಅದರಲ್ಲಿ ಧೋನಿ ಕೂಡ ಇದ್ದಾರೆ ಎಂದಿದ್ದರು.
2011ರ ವಿಶ್ವಕಪ್ ಸಂದರ್ಭದಲ್ಲಿ ಸುರೇಶ್ ರೈನಾರನ್ನು ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಧೋನಿ ಪ್ರಯತ್ನಿಸಿದ್ದಾಗಿ ಆರೋಪಿಸಿದ್ದರು. ಯುವಿ ಉತ್ತಮ ಪ್ರದರ್ಶನ ನೀಡಿದರೆ ತಮಗೆ ಉತ್ತಮ ಹೆಸರು ಬರುವುದಿಲ್ಲ ಎಂಬ ಕಾರಣದಿಂದ ಈ ರೀತಿ ಮಾಡಿದ್ದರು ಎಂದು ಯೋಗರಾಜ್ ಸಿಂಗ್ ಆರೋಪಿಸಿದ್ದರು. ಅಲ್ಲದೇ 1983ರಲ್ಲಿ ತಂಡದಿಂದ ಕೈಬಿಟ್ಟಿದ್ದಕ್ಕಾಗಿ ಕಪಿಲ್ ದೇವ್ ಮನೆಗೆ ಪಿಸ್ತೂಲ್ ಕೊಲ್ಲಲು ಹೋಗಿದ್ದರು ಎಂದು ತಿಳಿದುಬಂದಿದೆ.













