ಮನೆ ಶಿಕ್ಷಣ ಶಿಕ್ಷಕರ ಒಳಜಗಳದಿಂದ ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಝೀರೋ ಅಡ್ಮಿಷನ್.!

ಶಿಕ್ಷಕರ ಒಳಜಗಳದಿಂದ ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಝೀರೋ ಅಡ್ಮಿಷನ್.!

0

ಚಾಮರಾಜನಗರ: ಶಿಕ್ಷಕರ ಒಳಜಗಳ ಹಾಗೂ ಸರಿಯಾಗಿ ಪಾಠ ಪ್ರವಚನ ನಡೆಯದ ಆರೋಪದ ಹಿನ್ನೆಲೆ ಚಾಮರಾಜನಗರ ತಾಲೂಕಿನ ಮರಿಯಾಲ ಸ.ಹಿ.ಪ್ರಾ.ಶಾಲೆಯಲ್ಲಿ ಯಾವುದೇ ಅಡ್ಮಿಷನ್ ಆಗಿಲ್ಲ. ಇದರಿಂದ ಇಡೀ ಶಾಲೆ ಖಾಲಿಹೊಡೆಯುತ್ತಿದೆ.

ಈ ಶಾಲೆಯಲ್ಲಿ ಈವರೆಗೆ ಎರಡು ಶಿಕ್ಷಕರು, ಎರಡು ಅಡುಗೆ ಸಹಾಯಕರಿದ್ದಾರೆ. ಒಟ್ಟು ಏಳು ಕೋಣೆಗಳಿದ್ದು, ಶಿಕ್ಷಣ ನೀಡಲು ಬೇಕಾದ ಮೂಲಸೌಕರ್ಯಗಳು ಹಳೆಯದಾಗಿದ್ದರೂ ಇದ್ದವು. ಆದರೆ ಕಳೆದ ಶೈಕ್ಷಣಿಕ ವರ್ಷದಲ್ಲಿ 26 ವಿದ್ಯಾರ್ಥಿಗಳು ಇದ್ದರು. ಈ ವರ್ಷ ಶಾಲೆ ಆರಂಭವಾಗಿ ನಾಲ್ಕು ದಿನಗಳಾದರೂ ಇನ್ನೂ ಒಬ್ಬರೂ ವಿದ್ಯಾರ್ಥಿ ಸೇರಿಲ್ಲ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕೊಂಡೊಯ್ಯುತ್ತಿದ್ದಾರೆ.

ಶಿಕ್ಷಕರ ನಡುವಿನ ವೈಷಮ್ಯ ಹಾಗೂ ಶಿಸ್ತು ಕೊರತೆ ಶಾಲೆಯ ವಾತಾವರಣವನ್ನು ಹದಗೆಡಿಸಿದ್ದು, ಪೋಷಕರಲ್ಲಿ ನಂಬಿಕೆ ಕಳೆದುಹೋಗಿದೆ. ಕೆಲ ತಿಂಗಳ ಹಿಂದಷ್ಟೇ ಮುಖ್ಯ ಶಿಕ್ಷಕಿ ಸುಶೀಲಾ ಅವರು ಪೊಲೀಸರ ರಕ್ಷಣೆಯಲ್ಲಿ ಶಾಲೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಲೆಗೇ ದಿನನಿತ್ಯ ಪೊಲೀಸರ ಹಾಜರಾತಿ ಅಗತ್ಯವಾದ್ದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದರು.

ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ. ಸಮರ್ಪಕ ಬಿಸಿಯೂಟ ಸಿಗುತ್ತಿಲ್ಲ, ನೀರಿಲ್ಲ, ಸ್ವಚ್ಛತೆ ಇಲ್ಲ, ಜಗಳಗಳು ಮಾತ್ರ ದೈನಂದಿನ ದೃಶ್ಯ. ಈ ಎಲ್ಲಾ ಕಾರಣಗಳಿಂದಾಗಿ ಬಹುತೇಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಆದರೆ ಕಡಿಮೆ ಆದಾಯದ ಕುಟುಂಬಗಳಿಗೆ ಇದು ದೊಡ್ಡ ಹೊರೆ. “ಉಳ್ಳವರು ಖಾಸಗಿ ಶಾಲೆಗೆ ಹೋಗ್ತಾರೆ, ಬಡ ಕೂಲಿಕಾರ್ಮಿಕರ ಮಕ್ಕಳು ಏನು ಮಾಡಬೇಕು?” ಎಂಬ ಆಕ್ರೋಶ ವ್ಯಕ್ತವಾಗಿದೆ.

ಗ್ರಾಮದವರು ಈಗ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. “ಈ ಶಾಲೆಗೆ ಹೊಸ ಶಿಕ್ಷಕರನ್ನು ವರ್ಗಾವಣೆ ಮಾಡಿ, ಹಳೆಯ ಸಿಬ್ಬಂದಿಯನ್ನು ಬೇರೆಡೆ ಕಳುಹಿಸಿ ಶಾಲೆಯ ಶಿಸ್ತು, ಪಠ್ಯಕ್ರಮ ಮರುಸ್ಥಾಪನೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ಉದ್ದೇಶವನ್ನೇ ಜನರು ಅನುಮಾನಿಸುವ ಪರಿಸ್ಥಿತಿ ಬರಬಹುದು” ಎಂಬ ಅಪಾಯದ ಸೂಚನೆಗಳನ್ನು ಗ್ರಾಮಸ್ಥರು ನೀಡಿದ್ದಾರೆ.