ಬೆಂಗಳೂರು: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ಸಮಗ್ರ ಸಮೀಕ್ಷೆ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಿ, ಅದರ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಮಳೆ ಹಾಗೂ ಹವಾಮಾನ ವೈಪರೀತ್ಯ, ಜೊತೆಗೆ ವಿವಿಧ ಪರಿಶಿಷ್ಟ ಜಾತಿ ಸಂಘಟನೆಗಳ ಮನವಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಡಾ.ಹೆಚ್.ಎನ್.ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗಕ್ಕೆ ಸಮೀಕ್ಷೆ ಅವಧಿ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ನಿಗದಿಗೊಳಿಸಲಾಗಿದ್ದ ಸಮೀಕ್ಷೆ ವೇಳಾಪಟ್ಟಿಯು ವಿವಿಧ ತಾಂತ್ರಿಕ ಹಾಗೂ ಪರಿಸ್ಥಿತಿಗಳ ಕಾರಣದಿಂದ ಪೂರ್ಣಗೊಳ್ಳಲಾಗಿರಲಿಲ್ಲ. ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳಲ್ಲಿ ಸಮೀಕ್ಷೆ ಹೆಚ್ಚು ವಿಳಂಬವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮನೆ-ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಸಮೀಕ್ಷಾ ಅವಧಿಯನ್ನು ಮೇ 26ರಿಂದ 29ರವರೆಗೆ ವಿಸ್ತರಿಸಲಾಗಿದೆ.
ಅಷ್ಟೇ ಅಲ್ಲದೆ, ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ವಿಶೇಷ ಶಿಬಿರಗಳನ್ನು ಮೂರು ದಿನಗಳ ಕಾಲ ನಡೆಸಲು ದಿನಾಂಕಗಳನ್ನು ಮರುನಿಗದಿಪಡಿಸಲಾಗಿದೆ. ಈ ಶಿಬಿರಗಳು ಮೇ 30, 31 ಹಾಗೂ ಜೂನ್ 1ರಂದು ನಡೆಯಲಿವೆ. ಈ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಲು ವಿಳಂಬಗೊಂಡವರಿಗೂ ಅವಕಾಶ ಒದಗಿಸಲಾಗುತ್ತಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆಯ ಅವಧಿಯನ್ನೂ ಜೂನ್ 1ರವರೆಗೆ ವಿಸ್ತರಿಸಲಾಗಿದೆ.
ಇದು ಪರಿಶಿಷ್ಟ ಜಾತಿಯ ಒಳಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳನ್ನು ಗುರುತಿಸುವಲ್ಲಿ ನೆರವಾಗಲಿದೆ. ಇದರಿಂದ ಸರಿಯಾದ ಮಾಹಿತಿ ಆಧಾರವಾಗಿ ಒಳಮೀಸಲಾತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬಹುದಾಗಿದೆ.














