ಮೈಸೂರು: ತನ್ನ ಮಗು ಎದೆ ಹಾಲು ಕುಡಿಯುತ್ತಿಲ್ಲ ಎಂದು ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಗುಂಡೂರಾವ್ ನಗರದಲ್ಲಿ ನಡೆದಿದೆ.
ಗುಂಡೂರಾವ್ ನಗರದ ನಿವಾಸಿ ವೈದ್ಯೆ ಅರ್ಪಿತಾ ಆತ್ಮಹತ್ಯೆ ಮಾಡಿಕೊಂಡ ತಾಯಿಯಾಗಿದ್ದು, ಕಳೆದ ೫ ವರ್ಷಗಳ ಹಿಂದೆ ವೈದ್ಯ ವೃತ್ತಿ ಮಾಡುತ್ತಿದ್ದವರನ್ನೇ ಮದುವೆಯಾಗಿದ್ದರು.
೪ ವರ್ಷಗಳ ನಂತರ ಮಗುವಾಗಿದ್ದು, ಆ ಮಗುವಿಗೆ ಈಗ ೯ ತಿಂಗಳು. ಮಗು ಕಳೆದ ೧೫ ದಿನಗಳಿಂದ ಎದೆ ಹಾಲು ಕುಡಿಯುತ್ತಿರಲಿಲ್ಲ ಎಂದು ತಾಯಿ ಅರ್ಪಿತಾ ಬೇಸರಗೊಂಡಿದ್ದರು. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ, ನಗರದ ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ..