ಮೈಸೂರು: ಚಳಿಗಾಲ ಆರಂಭವಾಯಿತೆಂದರೆ ಮೈಸೂರು ವಿಶ್ವವಿದ್ಯಾಲಯದ ಹಲವಡೆ ಟಬುಬಿಯಾ ಹೂಗಳ ಲೋಕವೇ ಅರಳಿ ನಿಂತಿದ್ದು, ಇದರಿಂದ ಹಸಿರು ಕ್ಯಾಂಪಸ್ ನ ಸೌಂದರ್ಯ ಮತ್ತಷ್ಟು ಆಕರ್ಷಣೀಯವಾಗಿದೆ.
ಚಳಿಗಾಲದ ಸುಂದರಿ ಎಂದೇ ಕರೆಯಲಾಗುವ ಇಡೀ ನಗರವನ್ನು ಸಿಂಗಾರಗೊಳಿಸುವ ಟಬುಬಿಯಾ ಹೂವುಗಳು ನೋಡುಗರನ್ನು ಕಣ್ಮನ ಸೆಳೆಯುತ್ತಿವೆ. ಮಾನಸ ಗಂಗೋತ್ರಿಯ ಕ್ಯಾಂಪಸ್, ಮೈಸೂರು ವಿವಿಯ ಕ್ರಾರ್ಡ್ ಭವನ ಮುಂಭಾಗ, ಓವೆಲ್ ಮೈದಾನ, ಮಹಾರಾಜ ಪಿಯು ಕಾಲೇಜು ಸಮೀಪ ಸೇರಿದಂತೆ ಕೆಲ ಉದ್ಯಾನಗಳು, ನಗರದ ಹಲವು ರಸ್ತೆ ಬದಿಗಳಲ್ಲಿ ಗುಲಾಬಿ ಬಣ್ಣದ (ಟಬುಬಿಯಾ ಅವಲಂಡೆ) ಹಾಗೂ ತಿಳಿ ಗುಲಾಬಿ ಬಣ್ಣದ (ಟಬುಬಿಯಾ ರೋಜಿಯಾ) ಹೂವುಗಳು ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ.
ಮನಮೋಹಕ ಹೂವುಗಳ ಅಂದವನ್ನು ಕಣ್ತುಂಬಿಕೊಳ್ಳುತ್ತಿರುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೂಬಿಟ್ಟ ಮರದ ಮುಂದೆ ನಿಂತು ಫೋಟೋ ಮತ್ತು ಸೆಲ್ಛಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿರುವುದು ದಿನವು ಕಂಡು ಬರುವ ದೃಶ್ಯವಾಗಿದೆ. ಕಳೆದ ವಾರಾಂತ್ಯ ಕರ್ಫ್ಯೂ ವೇಳೆ ಯುವಕ- ಯುವತಿಯರು ಟಬುಬಿಯಾ ಸುಂದರಿ ಮುಂದೆ ಫೋಟೋಶೂಟ್ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಟಬುಬಿಯಾದ ವೈಜ್ಞಾನಿಕ ಹೆಸರು ‘ಬಿಗ್ನೋನಿಯೇಸಿ’. ಈ ಗುಲಾಬಿ ಬಣ್ಣದ ಹೂಗಳು ಕಾಲಕ್ಕನುಗುಣವಾಗಿ ಅರಳುತ್ತದೆ. ಚಳಿಗಾಲ ಆರಂಭವಾದಂತೆ ಮರದ ಪೂರ್ತಿ ಎಲೆಗಳೇ ಇಲ್ಲದೇ ಬರಿ ಹೂಗಳೇ ಕಂಗೊಳಿಸುತ್ತವೆ. ಆದರೆ ಕೇವಲ ಕೆಲವು ವಾರಗಳ ಜೀವಿತಾವಧಿ ಇರುವ ಟಬೂಬಿಯಾ ಇದೀಗ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಚಳಿಗಾಲದಲ್ಲಿ ಕಂಪು ಬೀರುವ ಟಬುಬಿಯಾ ರೋಸಿಯಾದಲ್ಲಿ ಹಲವು ಬಗೆಯ 90 ಕ್ಕೂ ಹೆಚ್ಚು ತಳಿಗಳಿವೆ. ಇದು ಕ್ಯೂಬಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.