ಬೆಳಗಾವಿ : ಮುಡಾ ಕಾರ್ಮೋಡಗಳು ಈಗ ಮುಖ್ಯಮಂತ್ರಿ ಕುರ್ಚಿಯನ್ನು ಆವರಿಸಿಕೊಂಡಿವೆ. ಯಾವುದೇ ಕ್ಷಣದಲ್ಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಎಂದು ಬೆಳಗಾವಿಯಲ್ಲಿ ಗುರುವಾರ(ಅ10)ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಬಹುಶಃ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಹೊಸ ಮುಖ್ಯಮಂತ್ರಿಗಳನ್ನು ನೋಡಬಹುದು. ಇದರಲ್ಲಿ ಅನುಮಾನ ಬೇಡ ಎಂದು ಹೊಸ ಬಾಂಬ್ ಸಿಡಿಸಿದರು.
ಮುಖ್ಯಮಂತ್ರಿಗಳ ಹುದ್ದೆಗೆ ಸಚಿವರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಸಿದ್ದರಾಮಯ್ಯ ಐದು ವರ್ಷ ಪೂರ್ಣಗೊಳಿಸುವದಿಲ್ಲ ಎಂಬುದು ಸಚಿವರಿಗೆ ಹಾಗೂ ಸ್ವತಃ ಸಿದ್ದರಾಮಯ್ಯ ಅವರಿಗೆ ಮನದಟ್ಟಾಗಿದೆ.ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲನೇ ಆರೋಪಿ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ಭಂಡತನ ಬಿಟ್ಟು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು. ಪ್ರಕರಣದ ಆಳ ನೋಡಿದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು.ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಪಕ್ಷದಲ್ಲಿ ಈಗ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತ ಹೋಗುತ್ತಿದೆ.ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡುತ್ತಾರೆ. ಯಾರು ಮುಖ್ಯಮಂತ್ರಿಗಳಾಗುತ್ತಾರೆ ಎಂಬುದನ್ನು ಕಾದು ನೋಡೋಣ’ ಎಂದರು.
ಆದರೆ ನಾವು ಐದು ವರ್ಷ ವಿರೋಧ ಪಕ್ಷದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇವೆ.ಈಗ ಕಾಂಗ್ರೆಸ್ ಸರಕಾರ ಕೋಮಾ ಸ್ಥಿತಿಯಲ್ಲಿದೆ. ಅಭಿವೃದ್ಧಿ ಕಾರ್ಯಗಳು ಆರಂಭವಾಗಿಯೇ ಇಲ್ಲ. ಇದರ ಮಧ್ಯೆ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನ ಆರಂಭವಾಗಿದೆ.ಮುಡಾ ಕಾರ್ಮೊಡಗಳು ಮುಖ್ಯಮಂತ್ರಿ ಕುರ್ಚಿಗೆ ಸಂಚಕಾರ ತಂದಿದೆ. ಸಚಿವ ಸಂಪುಟದ ಸದಸ್ಯರಿಗೆ ಮತ್ತು ಸರ್ಕಾರಕ್ಕೆ ಬೆಂಗಳೂರೇ ಕರ್ನಾಟಕದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಜಿಲ್ಲಾ ಪ್ರವಾಸ ಕೈ ಬಿಟ್ಟಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಹೊಂದಿದ್ದಾರೆ. ಈ ಸರ್ಕಾರದ ಬಂದ ಮೇಲೆ ಗುದ್ದಲಿ ಪೂಜೆ ಅಲ್ಲಾ ಗುದ್ದಲಿ ಕೂಡ ಕಾಣದ ಸ್ಥಿತಿ ಇದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.