ಬೆಂಗಳೂರು: ಕೊರೋನಾ ಮೂರನೇ ಅಲೆಯ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಕರೆದಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಇಂದು ಅವರ ಸಂಪುಟದ ಮತ್ತೊಬ್ಬ ಹಿರಿಯ ಪ್ರಮುಖ ಸಚಿವ ಜೆ ಸಿ ಮಾಧುಸ್ವಾಮಿಗೆ ಸಹ ಕೊರೋನಾ ಪಾಸಿಟಿವ್ ಬಂದಿದ್ದು ಅವರು ಮತ್ತು ಅವರ ಪುತ್ರಿಗೆ ಪಾಸಿಟಿವ್ ಕಂಡುಬಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ.
ಫೆಬ್ರವರಿ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆಯಿದ್ದು ಈ ಹೊತ್ತಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಆದ್ಯತೆಯಾಗಿ ವಾರ-10 ದಿನಗಳ ಮಟ್ಟಿಗೆ ಲಾಕ್ ಡೌನ್ ಆಗುತ್ತಾ ಎಂಬ ಅನುಮಾನ ಶುರುವಾಗಿದೆ.
ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ದಿನಕ್ಕೆ 15 ಸಾವಿರಕ್ಕೂ ಹೆಚ್ಚು ವರದಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಇಂದು ಅಪರಾಹ್ನ 3 ಗಂಟೆಗೆ ವರ್ಚುವಲ್ ಮೂಲಕ ಮಣಿಪಾಲ್ ಆಸ್ಪತ್ರೆಯಿಂದ ಮಹತ್ವದ ಸಭೆ ಕರೆದಿದ್ದಾರೆ. ಇದರಲ್ಲಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ.
ಆರೋಗ್ಯ ಇಲಾಖೆ ತುರ್ತು ಸಭೆ: ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಆರೋಗ್ಯ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆದಿದ್ದು ಇಂದು ಅಪರಾಹ್ನ ಸಭೆ ನಡೆಯಲಿದ್ದು, ಈ ಸಭೆ ವರ್ಚುವಲ್ ಆಗಿರುತ್ತದೆ.