ನವದೆಹಲಿ: ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಖಾಲಿ ಇರುವ ಹುದ್ದೆಗಳಲ್ಲಿ ಮಾಜಿ ಅಗ್ನಿವೀರರಿಗೆ ಶೇಕಡ 10 ಮೀಸಲಾತಿ ಘೋಷಿಸಿದೆ.
ಮಾತ್ರವಲ್ಲದೇ ವಯೋಮಿತಿಯನ್ನೂ ಸಡಿಲಗೊಳಿಸಲಾಗಿದೆ.
ಗಡಿ ಭದ್ರತಾ ಪಡೆ, ಜನರಲ್ ಡ್ಯೂಟಿ ಕೇಡರ್ (ನಾನ್-ಗೆಜೆಟೆಡ್) ನೇಮಕಾತಿ ನಿಯಮ– 2015 ತಿದ್ದುಪಡಿ ಮಾಡುವ ಮೂಲಕ ಈ ಆದೇಶ ಹೊರಡಿಸಲಾಗಿದೆ. ಗುರುವಾರದಿಂದಲೇ (ಮಾರ್ಚ್ 9) ಇದು ಜಾರಿಗೆ ಬಂದಿದೆ.
ಮಾಜಿ ಅಗ್ನಿವೀರರ ಮೊದಲ ಬ್ಯಾಚ್ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷಗಳವರೆಗೆ ಹಾಗೂ ಇತರ ಬ್ಯಾಚ್’ಗಳ ಅಭ್ಯರ್ಥಿಗಳಿಗೆ ಈ ಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಸಲಾಗುವುದು. ಇವರಿಗೆ ದೈಹಿಕ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದೆ.
ಸಶಸ್ತ್ರ ಪಡೆಗಳಲ್ಲಿ ಯುವಕರಿಗೆ ಸೇವೆ ಸಲ್ಲಿಸಲು ಕಳೆದ ವರ್ಷ ಜೂನ್ 14ರಂದು ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಆರಂಭಿಸಿತ್ತು.
Saval TV on YouTube