ಮನೆ ಕಾನೂನು ಕರ್ನಾಟಕ ಹಿಜಾಬ್ ಪ್ರಕರಣದ ಶೀಘ್ರ ವಿಚಾರಣೆಗೆ ಕೋರಿಕೆ; ನಿರ್ಧರಿಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್

ಕರ್ನಾಟಕ ಹಿಜಾಬ್ ಪ್ರಕರಣದ ಶೀಘ್ರ ವಿಚಾರಣೆಗೆ ಕೋರಿಕೆ; ನಿರ್ಧರಿಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್

0

ಕಾಲೇಜು ಕ್ಯಾಂಪಸ್‌ಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (ಶಿರವಸ್ತ್ರ) ಧರಿಸುವುದನ್ನು ನಿಷೇಧಿಸಿ  ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಲು ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರೆದುರು ಪ್ರಸ್ತಾಪಿಸಿದ ವಕೀಲ ಶಾದನ್ ಫರಾಸತ್, ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದಿಂದಾಗಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದರು.

ವಿದ್ಯಾರ್ಥಿನಿಯರ ಒಂದು ವರ್ಷದ ಶೈಕ್ಷಣಿಕ ವರ್ಷ ನಷ್ಟವಾಗಿದ್ದು ಪರೀಕ್ಷೆಗಳು ಮಾರ್ಚ್ 9ರಿಂದ ಆರಂಭವಾಗಲಿವೆ ಎಂದು ಫರಾಸತ್ ನ್ಯಾಯಾಲಯಕ್ಕೆ ತಿಳಿಸಿದರು. ಆಗ ಸಿಜೆಐ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಈ ಹಿಂದೆ ಜನವರಿ 23ರಂದು ಪ್ರಕರಣವನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ “ಪ್ರಕರಣದಿಂದ ತೊಂದರೆ ಎದುರಿಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಜನವರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗಬೇಕಿದೆ. ಹೀಗಾಗಿ ಮಧ್ಯಂತರ ನಿರ್ದೇಶನ ನೀಡಿದರೆ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ” ಎಂದು ಕೋರಿದ್ದರು. ಆಗ ಶೀಘ್ರದಲ್ಲೇ ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು ಎಂದು ತ್ರಿಸದಸ್ಯ ಪೀಠ ಅರ್ಜಿದಾರರಿಗೆ ಭರವಸೆ ನೀಡಿತ್ತು.

ಹಿಜಾಬ್‌ ಧರಿಸುವುದಕ್ಕೆ ನಿಷೇಧ ಹೇರುವ ಸಂಬಂಧ ಕರ್ನಾಟಕದ ಸರ್ಕಾರಿ ಕಾಲೇಜುಗಳಿಗೆ ಪರಿಣಾಮಕಾರಿ ಅಧಿಕಾರ ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಿನ್ನ ತೀರ್ಪು ನೀಡಿತ್ತು.  

ಆರಂಭದಲ್ಲಿ ಕರ್ನಾಟಕ ಹೈಕೋರ್ಟ್‌ ಹಿಜಾಬ್‌ ನಿಷೇಧಿಸಿದ್ದ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಇದರ ಬೆನ್ನಲ್ಲೇ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳ ತಲುಪಿತ್ತು.

ಹಿಂದಿನ ಲೇಖನವರ್ಗಾವಣೆ ಬೆನ್ನಲ್ಲೇ ಡಿ ರೂಪಾ ಅವರದ್ದು ಎನ್ನಲಾದ ಆಡಿಯೋ ವೈರಲ್
ಮುಂದಿನ ಲೇಖನಮಾಂಸದೂಟ ಸೇವಿಸಿ ನಾಗಬನಕ್ಕೆ ಭೇಟಿ: ಸಿಟಿ ರವಿ ವಿರುದ್ಧ ಆಕ್ರೋಶ