ಮಡಿಕೇರಿ: ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ರೈಲು ಯೋಜನೆಗೆ 1000 ಕೋಟಿ ರೂ. ಅನುದಾನ ನೀಡಲಾಗಿದೆ.
ಮೈಸೂರು-ಕುಶಾಲನಗರ ನೂತನ 87.2 ಕಿ. ಮೀ. ಮಾರ್ಗ ನಿರ್ಮಾಣಕ್ಕೆ 1,854.62 ಕೋಟಿ ರೂ. ವೆಚ್ಚವಾಗಲಿದೆ ಎಂದು 2019ರ ಫೆಬ್ರವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಅಂದಾಜಿಸಲಾಗಿತ್ತು
ಪ್ರತಿ ಕಿಲೋಮೀಟರ್ ಮಾರ್ಗ ನಿರ್ಮಾಣಕ್ಕೆ 21.27 ಕೋಟಿ ಬೇಕು ಎಂದು ಅಂದಾಜಿಸಲಾಗಿದೆ. 274.65 ಹೆಕ್ಟೇರ್ ಒಣಭೂಮಿ ಮತ್ತು 275.15 ಹೆಕ್ಟೇರ್ ನೀರಾವರಿ ಜಮೀನು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ನಿರ್ಮಾಣದಿಂದ ಕೊಡಗಿನಲ್ಲಿ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.
ಮೈಸೂರಿನಿಂದ ಕೊಡಗು ಜಿಲ್ಲೆಯ ಕುಶಾಲನಗರದ ತನಕ ರೈಲು ಮಾರ್ಗ ನಡೆಸಲು ಸಮೀಕ್ಷೆ ನಡೆಸಲಾಗಿತ್ತು. ಆದರೆ ಈ ಮಾರ್ಗ ಲಾಭದಾಯಕವಲ್ಲ ಎಂದು ಅದನ್ನು ಕೈ ಬಿಡಲಾಗಿತ್ತು.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ರೈಲು ಮಾರ್ಗ ನಿರ್ಮಾಣಕ್ಕೆ ಪುನಃ ರೈಲ್ವೆ ಸಚಿವರಿಗೆ ಮನವಿ ಸಲ್ಲಿಕೆ ಮಾಡಿದ್ದರು. ಪಿಯೂಷ್ ಗೋಯೆಲ್ ರೈಲು ಸಚಿವರಾಗಿದ್ದಾಗ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. 2022-23ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಯೋಜನೆಗೆ 1000 ಕೋಟಿ ರೂ. ಅನುದಾನ ನೀಡಿದ್ದಾರೆ.
ಮೈಸೂರು-ಕುಶಾಲನಗರ ರೈಲು ಮಾರ್ಗಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ಕೊಡಗು ಮೂಲದ ಸಿ. ಪಿ. ಮುತ್ತಣ್ಣ ಕರ್ನಾಟಕ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಮಾಡಿದ್ದರು.
ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ. ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ರೈಲು ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಒಪ್ಪಿಗೆ ಪಡೆಯಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಗೊಳಿತ್ತು.
ಪ್ರಸ್ತಾವಿತ ರೈಲು ಮಾರ್ಗದಿಂದ ನೂರಾರು ಎಕರೆ ಅರಣ್ಯ ನಾಶವಾಗಲಿದೆ. ಕುಶಾಲನಗರದಲ್ಲಿ ಆನೆ ಕಾರಿಡಾರ್ ಸಹ ಇದೆ. ಆನೆ ಕಾರಿಡಾರ್‌ನಲ್ಲಿ ಅಭಿವೃದ್ದಿ ಯೋಜನೆ ಕೈಗೊಳ್ಳುವ ಮೊದಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಮತ್ತು ಪರಿಸರ ಇಲಾಖೆ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.