ಇಸ್ಲಾಮಾಬಾದ್: ಭಾರತ ನಡೆಸಿದ ಆಪರೇಷನ್ ಸಿಂಧೂರ್ ವೇಳೆ ಸಂಭವಿಸಿದ ಹಾನಿಯ ಬಗ್ಗೆ ಪಾಕಿಸ್ತಾನ ಕೊನೆಗೂ ಅಧಿಕೃತವಾಗಿ ಸತ್ಯ ಒಪ್ಪಿಕೊಂಡಿದೆ. ಕಳೆದ ವಾರ ನಡೆದ ಈ ಉಗ್ರದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ತನ್ನ 11 ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಕಳೆದುಕೊಂಡಿದೆ ಹಾಗೂ 78 ನಾಗರಿಕರು ಗಾಯಗೊಂಡಿದ್ದಾರೆ ಎಂದು ಇಸ್ಲಾಮಾಬಾದ್ ಒಪ್ಪಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಗೆ ತಕ್ಷಣದ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂಧೂರ್ ಅನ್ನು ಆರಂಭಿಸಿತ್ತು. ಈ ನಿಖರ ದಾಳಿಯು ಪಾಕಿಸ್ತಾನದ ಆಂತರಿಕ ಸೈನಿಕ ಹಾಗೂ ವಿಮಾನ ನಿಲ್ದಾಣ ಸೌಕರ್ಯಗಳಿಗೆ ದೊಡ್ಡ ಮಟ್ಟದ ಹಾನಿ ತಂದಿದ್ದು, ಹಲವಾರು ಉಗ್ರರು ಮತ್ತು ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಮೊದಲಿನಿಂದಲೂ ಭಾರತದ ಸೇನೆಯಿಂದ ಪ್ರಕಟವಾಗುತ್ತಿತ್ತು.
ಇದೀಗ, ಪಾಕಿಸ್ತಾನ ಆ ಅಧಿಕೃತ ದೃಢೀಕರಣ ನೀಡಿದ್ದು, ಭಾರತೀಯ ಸೇನೆಯ ನಿಖರ ದಾಳಿ ಎಷ್ಟು ಪರಿಣಾಮಕಾರಿಯಾಗಿ ನಡೆದಿತ್ತು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 11 ಪಾಕಿಸ್ತಾನಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂಬುದನ್ನು ಪಾಕಿಸ್ತಾನ ಓಪನ್ ಆಗಿ ಒಪ್ಪಿಕೊಂಡಿದ್ದು, ಇದರಲ್ಲಿ ಆರು ಪಾಕಿಸ್ತಾನ ಸೇನೆಯ ಸೈನಿಕರು ಹಾಗೂ ಐವರು ಪಾಕಿಸ್ತಾನ ವಾಯುಪಡೆದವರಿದ್ದಾರೆ.
ಮೃತಪಟ್ಟಿ ಈ ಕೆಳಗಿನಂತಿದೆ:
ಪಾಕಿಸ್ತಾನ ಸೇನೆ:
- ಲ್ಯಾನ್ಸ್ ನಾಯಕ್ ಅಬ್ದುಲ್ ರೆಹಮಾನ್
- ಲ್ಯಾನ್ಸ್ ನಾಯಕ್ ದಿಲಾವರ್ ಖಾನ್
- ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ
- ನಾಯಕ್ ವಕಾರ್ ಖಾಲಿದ್
- ಸಿಪಾಯಿ ಮುಹಮ್ಮದ್ ಅದೀಲ್ ಅಕ್ಬರ್
- ಸಿಪಾಯಿ ನಿಸಾರ್
ಪಾಕಿಸ್ತಾನ ವಾಯುಪಡೆ:
- ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್
- ಮುಖ್ಯ ತಂತ್ರಜ್ಞ ಮುಹಮ್ಮದ್ ಔರಂಗಜೇಬ್
- ಹಿರಿಯ ತಂತ್ರಜ್ಞ ನಜೀಬ್ ಸುಲ್ತಾನ್
- ಕಾರ್ಪೋರಲ್ ತಂತ್ರಜ್ಞ ಫಾರೂಕ್
- ಹಿರಿಯ ತಂತ್ರಜ್ಞ ಮುಬಾಶರ್
ಪಾಕಿಸ್ತಾನದ ನಾಗರಿಕ ಪ್ರದೇಶಗಳಿಗೂ ಈ ದಾಳಿಯ ಪರಿಣಾಮ ತಲಪಿದ್ದು, ಸುಮಾರು 78 ನಾಗರಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಗಳ ಮೂಲಗಳು ಹೇಳಿದ್ದಾರೆ. ಈ ಒಪ್ಪಿಗೆ ಒಂದು ಮಹತ್ವದ ಬೆಳವಣಿಗೆಯಾಗಿದ್ದು, ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಶಾಂತಿ ಸ್ಥಾಪನೆಗೆ ಭಾರತ ಮತ್ತು ಪಾಕಿಸ್ತಾನ ಈಚೆಗೆ ಡಿಜಿಎಂಒ ಮಟ್ಟದಲ್ಲಿ ಮಾತುಕತೆ ನಡೆಸಿದ್ದು, ಇದರ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.
ಭಾರತ ಈ ದಾಳಿಯನ್ನು ಪಹಲ್ಗಾಮ್ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆಯಾಗಿ ನಿರ್ವಹಿಸಿದ್ದು, ಉಗ್ರರಿಗೆ ಆಶ್ರಯ ನೀಡುತ್ತಿರುವ ಮೂಲಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ನಡೆಸಿದ ಪರಿಣಾಮಕಾರಿ ಹೆಜ್ಜೆಯಾಗಿದೆ. ಆಪರೇಷನ್ ಸಿಂಧೂರ್ ಮೂಲಕ ಭಾರತ ತನ್ನ ಗಡಿರೇಖೆ ಪಾರುಪತ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಬದ್ಧವಿರುವುದನ್ನು ಮತ್ತೊಮ್ಮೆ ತೋರಿಸಿದೆ. ಪಾಕಿಸ್ತಾನದ ಅಧಿಕೃತ ಒಪ್ಪಿಗೆ, ಈ ಕಾರ್ಯಾಚರಣೆಯ ಯಶಸ್ಸಿಗೆ ಸಜ್ಜಾದ ದೃಢೀಕರಣವಾಗಿದೆ.














