ಮನೆ ರಾಜ್ಯ ಮತ್ತೆ ರಿಂಗಣಿಸಿದ ನಿಷೇಧಿತ ಸ್ಯಾಟಲೈಟ್​​ ಫೋನ್​: ಗುಪ್ತಚರ ಇಲಾಖೆ ಫುಲ್​ ಅಲರ್ಟ್​

ಮತ್ತೆ ರಿಂಗಣಿಸಿದ ನಿಷೇಧಿತ ಸ್ಯಾಟಲೈಟ್​​ ಫೋನ್​: ಗುಪ್ತಚರ ಇಲಾಖೆ ಫುಲ್​ ಅಲರ್ಟ್​

0

ಬೆಂಗಳೂರು(Bengaluru): ಕಳೆದ 10 ದಿನಗಳಲ್ಲಿ 4 ಕಡೆಗಳಿಂದ ನಿಷೇಧಿತ ಸ್ಯಾಟಲೈಟ್​ ಫೋನ್​​ ಸಂಪರ್ಕ ಸಾಧಿಸಿರುವ ಸಿಗ್ನಲ್​ ಪತ್ತೆಯಾಗಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಕರಾವಳಿಯ ಮೂರು ಕಡೆಗಳಲ್ಲಿ ಹಾಗೂ ಚಿಕ್ಕಮಗಳೂರಿನ ದಟ್ಟಾರಣ್ಯದಲ್ಲಿ ನಿಷೇಧಿತ ಸ್ಯಾಟಲೈಟ್‌ ಫೋನ್‌ಗಳ ಸಿಗ್ನಲ್‌ ಪತ್ತೆಯಾಗಿದೆ.

ಮೇ 23ರಿಂದ 29ರ ವರೆಗೆ ಮಂಗಳೂರಿನ ಎರಡು ಕಡೆ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ಸ್ಯಾಟಲೈಟ್‌ ಫೋನ್ ಸಿಗ್ನಲ್ ಪತ್ತೆಯಾಗಿವೆ ಎಂದು ಕೇಂದ್ರ ಗುಪ್ತಚರ ಇಲಾಖೆ ತಿಳಿಸಿದೆ. ಇದರ ಬೆನ್ನಲ್ಲೇ ರಾಜ್ಯ ಆಂತರಿಕ ಭದ್ರತಾ ವಿಭಾಗ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.

ನಿಷೇಧಿತ ಸ್ಯಾಟಲೈಟ್​ ಫೋನ್ ಬಳಕೆ ಮಾಡಿರುವ ವ್ಯಕ್ತಿಗಳ ಪತ್ತೆಗೆ ಇದೀಗ ಐಎಸ್​ಡಿ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ಇದು ಮೂರನೇ ಸಲ ಕರೆ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ – ಶಿರಸಿಯ ಮಧ್ಯ ಇರುವ ದಟ್ಟಾರಣ್ಯ ಪ್ರದೇಶದಲ್ಲಿ, ಮಂಗಳೂರು ನಗರ ಹೊರಭಾಗದ ನಾಟೆಕಲ್, ಕುಳಾಯಿ ಹಾಗೂ ಚಿಕ್ಕಮಗಳೂರಿನ ಕಡೂರು – ಬೀರೂರು ನಡುವಿನ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್‌ ಫೋನ್‌ ಸಿಗ್ನಲ್ ಪತ್ತೆಯಾಗಿವೆ. ಹೀಗಾಗಿ, ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸ್ ಇಲಾಖೆಗೆ ಎಚ್ಚರಿಕೆ ಸಹ ನೀಡಿದೆ.

ಶಂಕಿತ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಈ ಹಿಂದೆ ಕೂಡ ನಿಷೇಧಿತ ಸ್ಯಾಟಲೈಟ್ ಫೋನ್‌ಗಳ ಕುರಿತು ಕಳೆದ ವರ್ಷ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗಿದ್ದು, ಕೇಂದ್ರೀಯ ಸಂಸ್ಥೆಗಳೊಂದಿಗೆ ಸರ್ಕಾರವು ಸಮನ್ವಯದಿಂದ ಪರಿಸ್ಥಿತಿ ನಿಭಾಯಿಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದರು.

ಹಿಂದಿನ ಲೇಖನರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವು: ತನಿಖೆಗೆ ಆದೇಶಿಸಿದ ಸಿಎಂ
ಮುಂದಿನ ಲೇಖನಮರುಮದುವೆಯಾದ ವಿಧವೆಗೆ ದಿವಂಗತ ಗಂಡನ ಆಸ್ತಿಯ ಮೇಲೆ ಹಕ್ಕು ಇರಲಿದೆಯೇ ?