ಶಿಮ್ಲಾ (Shimla)-ಬಿಜೆಪಿ ನೇತೃತ್ವದ ಆಡಳಿತವು ಭ್ರಷ್ಟಾಚಾರ ನಿರ್ಮೂಲನೆ ಮಾಡಿದ್ದು, ಎಂಟು ವರ್ಷಗಳಲ್ಲಿ ದೇಶವು ಅಗಾಧ ಬದಲಾವಣೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಇಲ್ಲಿ ರ್‍ಯಾಲಿಗೂ ಮೊದಲು ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿದರು. ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಾಗಿ 80 ಕೋಟಿ ರೈತರಿಗೆ 21,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಸಹಿಸದೇ, ವಿವಿಧ ಯೋಜನೆಗಳ ಒಂಬತ್ತು ಕೋಟಿ ನಕಲಿ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ವಿದ್ಯಾರ್ಥಿ ವೇತನ ಅಥವಾ ಯಾವುದೇ ಯೋಜನೆಯಾಗಿರಲಿ, ಅರ್ಹರಿಗೆ ನೇರ ವರ್ಗಾವಣೆಯ ಮೂಲಕ ಸರ್ಕಾರದ ಪ್ರಯೋಜನವನ್ನು ತಲುಪಿಸಿ, ಭ್ರಷ್ಟಾಚಾರದ ವ್ಯಾಪ್ತಿಯನ್ನು ಹತ್ತಿಕ್ಕಿದ್ದೇವೆ. 22 ಲಕ್ಷ ಕೋಟಿ ರೂ. ಅನ್ನು ನೇರ ನಗದು ವರ್ಗಾವಣೆ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ ಎಂದು ಹೇಳಿದರು.
ಬಿಲಾಸ್‌ಪುರದಲ್ಲಿ ನಿರ್ಮಿಸುತ್ತಿರುವ ಏಮ್ಸ್ ಅನ್ನು ಉಲ್ಲೇಖಿಸಿ ನಾವು ದೇಶದ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲು ಯೋಜಿಸಿದ್ದೇವೆ ಎಂದು ಹೇಳಿದ ಅವರು, ಕೋವಿಡ್ ಸಾಂಕ್ರಾಮಿಕ ಎದುರಿಸಲು ಕೈಗೊಂಡ ಸರ್ಕಾರ ಕ್ರಮಗಳನ್ನು ಪ್ರಶಂಸಿದರು. ದೇಶದಲ್ಲಿ ಈವರೆಗೆ ಸುಮಾರು 200 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅಲ್ಲದೆ, ಹಲವು ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಪೂರೈಸುವ ಮೂಲಕ ಭಾರತವು ಸ್ನೇಹದ ಹಸ್ತ ಚಾಚಿದೆ ಎಂದರು.