ಡೆಹ್ರಾಡೂನ್: ₹130 ಕೋಟಿ ಅವ್ಯವಹಾರ ಆರೋಪದಡಿ ಉತ್ತರ ಪ್ರದೇಶದ ರಾಜ್ಯ ನಿರ್ಮಾಣ ನಿಗಮದ ಡೆಹ್ರಾಡೂನ್ ಘಟಕದ ಐವರು ನಿವೃತ್ತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ರಾಜ್ಯ ನಿರ್ಮಾಣ ನಿಗಮದ ಡೆಹ್ರಾಡೂನ್ ಘಟಕದ ಹೆಚ್ಚುವರಿ ಪ್ರಾಜೆಕ್ಟ್ ಮ್ಯಾನೇಜರ್ ಸುನೀಲ್ ಕುಮಾರ್ ಮಲಿಕ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2018 ಮತ್ತು 2019ರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಇಲಾಖಾ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಜಂಗಢದ ಆಗಿನ ಪ್ರಾಜೆಕ್ಟ್ ಮ್ಯಾನೇಜರ್ ಶಿವ ಶರ್ಮಾ, ದೆಹಲಿಯ ಪಂಜಾಬಿ ಬಾಗ್‌ನ ಅಂದಿನ ಪ್ರಾಜೆಕ್ಟ್ ಮ್ಯಾನೇಜರ್ ಪ್ರದೀಪ್ ಕುಮಾರ್ ಶರ್ಮಾ, ಉತ್ತರ ಪ್ರದೇಶದ ಬಿಜ್ನೋರ್‌ನ ಸಹಾಯಕ ಅಕೌಂಟೆಂಟ್ ವಿರೇಂದ್ರ ಕುಮಾರ್, ಉತ್ತರ ಪ್ರದೇಶದ ಹರ್ದೋಯ್‌ನ ಅಕೌಂಟೆಂಟ್ ರಾಮ್ ಪ್ರಕಾಶ್ ಗುಪ್ತಾ ಮತ್ತು ಎಂಜಿನಿಯರ್ ಸತೀಶ್ ಕುಮಾರ್ ಉಪಾಧ್ಯಾಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರದೀಪ್ ಕುಮಾರ್ ಶರ್ಮಾ ಅವರನ್ನು ಐದು ಪ್ರಕರಣಗಳಲ್ಲಿ, ಶಿವ ಶರ್ಮಾ ಮತ್ತು ರವಿ ಅವರನ್ನು ತಲಾ ಮೂರು ಪ್ರಕರಣಗಳಲ್ಲಿ, ಗುಪ್ತಾ ಅವರನ್ನು ಎರಡು ಪ್ರಕರಣಗಳಲ್ಲಿ ಮತ್ತು ಉಪಾಧ್ಯಾಯ ಅವರನ್ನು ಒಂದು ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಮತ್ತು 409 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.















