ಬೆಂಗಳೂರು (Bengaluru): ರಾಜ್ಯದಲ್ಲಿ 14 ಜಿಲ್ಲೆಗಳ 161 ಗ್ರಾಮಗಳು ಪ್ರವಾಹ ಭಾದಿತವಾಗಿವೆ. 21, 727 ಜನರು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ, ಮಳೆ ಸಂಬಂಧಿತ ಅನಾಹುತಗಳಲ್ಲಿ ಈವರೆಗೂ 73 ಮಂದಿ ಸಾವನ್ನಪ್ಪಿದ್ದಾರೆ. 7,386 ಜನರನ್ನು 75 ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. 8,197ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
2,949 ಮನೆಗಳು ತೀವ್ರವಾಗಿ ಹಾಗೂ 17, 750 ಮನೆಗಳು ಭಾಗಶಃವಾಗಿ ಹಾನಿಯಾಗಿವೆ. 1,29,087 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ, 7,942 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಈ ವರ್ಷ 11,768 ಕಿಲೋ ಮೀಟರ್ ರಸ್ತೆ, 1,152 ಸೇತುವೆಗಳು, 122 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 2,249 ಅಂಗನವಾಡಿ ಕೇಂದ್ರಗಳು ಹಾಗೂ 95 ನೀರಾವರಿ ಕೊಳಗಳು ಹಾನಿಯಾಗಿವೆ. ತೀವ್ರಗತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲೆಗಳಲ್ಲಿ 857 ಕೋಟಿ ಲಭ್ಯವಿದೆ ಎಂದು ತಿಳಿಸಿದರು.
ಪ್ರವಾಹ ಸಂಬಂಧಿತ ಅನಾಹುತಗಳಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇದರಲ್ಲಿ 4 ಲಕ್ಷ ರೂಪಾಯಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಸಹ ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಭಾರಿ ಮಳೆಯಿಂದ ಮನೆ ಕಳೆದುಕೊಂಡು ಕಾಳಜಿ ಕೇಂದ್ರ ಮತ್ತು ನೆಂಟರಿಷ್ಟರ ಮನೆಯಲ್ಲಿರುವ ಸಂತ್ರಸ್ಥರಿಗೆ ಅಗತ್ಯ ದಿನ ಬಳಕೆ ವಸ್ತುಗಳನ್ನೂಳಗೊಂಡ ಕಿಟ್ ಗಳನ್ನು ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಳೆ ಹಾನಿ ಕುರಿತು ಸ್ಪಷ್ಟನೆ ನೀಡಿದ ಅಶೋಕ್, ಈ ಕಿಟ್ ನಲ್ಲಿ 10 ಕೆಜಿ ಅಕ್ಕಿ, ಒಂದು ಕೆಜಿ ತೊಗರಿಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಉಪ್ಪು, ಒಂದು ಕೆಜಿ ಸಕ್ಕರೆ, 100 ಗ್ರಾಂ ಖಾರದ ಪುಡಿ, ಟೀ ಪುಡಿ, ಅರಿಶಿನಪುಡಿ ಹೀಗೆ ದಿನ ಬಳಕೆ ವಸ್ತುಗಳು ಇರುತ್ತವೆ. ಈ ಕಿಟ್ ನ ಬೆಲೆ 1 ಸಾವಿರ ರೂಪಾಯಿ ಆಗಿದ್ದು ಎಲ್ಲ ಸಂತ್ರಸ್ಥ ಕುಟುಂಬಗಳಿಗೆ ಉಚಿತವಾಗಿ ನೀಡಲಾಗುತ್ತದೆ ಎಂದರು.