ಮನೆ ರಾಜಕೀಯ ನಾರಾಯಣ ಗುರು ಸ್ತಬ್ಧಚಿತ್ರ ವಿವಾದ; ನಾಳೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ನಾರಾಯಣ ಗುರು ಸ್ತಬ್ಧಚಿತ್ರ ವಿವಾದ; ನಾಳೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

0

ಮಂಗಳೂರು: ನವದೆಹಲಿಯ ರಾಜ್ಪಥ್ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸ್ತಬ್ಧಚಿತ್ರದ ಪರೇಡ್ನಲ್ಲಿ ಕೇರಳ ಸರ್ಕಾರ ಕಳುಹಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ (ಜ.26)  ದೊಡ್ಡಮಟ್ಟದ ಹೊರಾಟ ನಡೆಸಲು ವೇದಿಕೆ ಸಜ್ಜಾಗಿದೆ.

ಜನವರಿ 26ರಂದು ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ ಖಂಡಿಸಿ, ಮಂಗಳೂರಿನಲ್ಲಿ ನಾರಾಯಣ ಗುರು ಟ್ಯಾಬ್ಲೋ ಮೆರವಣಿಗೆ ನಡೆಯಲಿದೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಮೆರವಣಿಗೆ ಸಂಗಮವಾಗಲಿದ್ದು, ಸಾವಿರಾರು ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರ ತಿರಸ್ಕರಿಸಿವುದನ್ನು ವಿರೋಧಿಸಿ ಸಂಪೂರ್ಣ ವಾಹನ ಜಾಥಾ, ಮೌನ ಮೆರವಣಿಗೆ ನಡೆಯಲಿದೆ. ಕಾಲ್ನಡಿಗೆ ಜಾಥಾಕ್ಕೆ ಅವಕಾಶವಿಲ್ಲ. ಈ ಮೆರವಣಿಗೆಯಲ್ಲಿ ಹಳದಿ ಶಾಲು, ಹಳದಿ ಧ್ವಜಕ್ಕೆ ಮಾತ್ರ ಅವಕಾಶ ಬೇರೆ ಬಣ್ಣದ ಶಾಲು, ಧ್ವಜಗಳಿಗೆ ಅವಕಾಶವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಬ್ರಿಗೇಡ್ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

2-3 ದಿನಗಳಿಂದ ಈ ಯಾತ್ರೆಯನ್ನು ನಿಲ್ಲಿಸುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡವೊಂದು ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿತ್ತು. ಆದರೆ ಯಾವುದೇ ಕಾರಣಕ್ಕೆ ಯಾತ್ರೆಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಪೂಜಾರಿಯವರು ಹೇಳಿದ್ದು, ಈ ಮೂಲಕ ಇದೊಂದು ವಿಫಲ ಯತ್ನವಾಗಿದೆ ಎಂದು ಹೇಳಿದ್ದಾರೆ.

ನಾಲ್ಕು ಬಾರಿ ಜನಾರ್ದನ ಪೂಜಾರಿಯವರು ಸೋಲಲು, ಬಿಲ್ಲವ ಸಮುದಾಯದ ಯುವಕರನ್ನು ಜನಾರ್ದನ ಪೂಜಾರಿಯವರಿಂದ ದೂರ ಮಾಡಿರುವ ಶ್ರೇಯಸ್ಸು ಹರಿಕೃಷ್ಣರಿಗಿದೆ. ಇವರು ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟಿದ್ದರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾರ್ದನ ಪೂಜಾರಿಯವರ ಹೆಸರು ಹಾಳಾಗಲು ಕಾರಣ. ಇದೀಗ ಮತ್ತೆ ಜನಾರ್ದನ ಪೂಜಾರಿಯವರ ಹೆಸರು ಹಾಳು ಮಾಡಲು ಯಾತ್ರೆಯನ್ನು ತಡೆಯುವ ಯತ್ನ ಮಾಡುತ್ತಿದ್ದು, ನಾಚಿಕೆಯಾಗಬೇಕು ಈ ಮನುಷ್ಯನಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಕೇಂದ್ರ ಸರ್ಕಾರದಿಂದ ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ಖಂಡಿಸಿ ಜನಾರ್ದನ ಪೂಜಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿಯ ಜನಾರ್ದನ ಪೂಜಾರಿ ನಿವಾಸಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿದ್ದಾರೆ.

ಈ ವೇಳೆ ನಾರಾಯಣ ಗುರು ಟ್ಯಾಬ್ಲೋ ವಿವಾದದ ಬಗ್ಗೆ ಜನಾರ್ದನ ಪೂಜಾರಿಗೆ ಮನವರಿಕೆ ಮಾಡಿದ ಸಚಿವ ಕೋಟಾ, ಕೇರಳ ಸರ್ಕಾರ ಮತ್ತು ಕಮ್ಯುನಿಸ್ಟರ ಕುತಂತ್ರದಿಂದ ವಿವಾದ ಎದ್ದಿದೆ. ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿಗೆ ನಾರಾಯಣ ಗುರುಗಳ ಬಗ್ಗೆ ಗೌರವವಿದೆ. ಅವರು ಟ್ಯಾಬ್ಲೋ ತಿರಸ್ಕಾರ ಮಾಡಿಲ್ಲ, ಕೇರಳ ಸರ್ಕಾರ ಸುಮ್ಮನೆ ವಿವಾದ ಎಬ್ಬಿಸಿದೆ. ಜ.26ರ ಪ್ರತಿಭಟನೆ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ ಎಂದು ಸಚಿವರು ಮನವಿ ಮಾಡಿದ್ದಾರೆ. ನಾರಾಯಣ ಗುರುಗಳ ಯಾವುದೇ ಕಾರ್ಯಕ್ರಮಕ್ಕೆ ಬಿಜೆಪಿ ಬೆಂಬಲವಿದೆ. ಆದರೆ ಕಮ್ಯುನಿಸ್ಟರ ಈ ಕುತಂತ್ರ ರಾಜಕೀಯದ ಬಗ್ಗೆ ನಮ್ಮ ವಿರೋಧವಿದೆ ಅಂತ ಪೂಜಾರಿಗೆ ಕೋಟಾ ತಮ್ಮ ನಿಲುವು ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಜನಾರ್ದನ ಪೂಜಾರಿ, ಪ್ರತಿಭಟನೆ ಕೈ ಬಿಡದೇ ರಾಜಕೀಯ ನುಸುಳದಂತೆ ಮೆರವಣಿಗೆ ನಡೆಸುತ್ತೇವೆ. ಸಮಾನ ಮನಸ್ಕರು ಮತ್ತು ನಾರಾಯಣ ಗುರು ಅಭಿಮಾನಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಇದೊಂದು ರಾಜಕೀಯ ರಹಿತ ಹೋರಾಟ, ಅದನ್ನು ರಾಜಕೀಯ ನುಸುಳದಂತೆ ನಡೆಸುತ್ತೇವೆ ಎಂದು ಕೋಟಾ ಶ್ರೀನಿವಾಸ ಪೂಜಾರಿಗೆ ಜನಾರ್ದನ ಪೂಜಾರಿ ಮನವರಿಕೆ ಮಾಡಿದ್ದಾರೆ. ಆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ನಾರಾಯಣ ಗುರುಗಳ ಬದಲು ಶಂಕರಾಚಾರ್ಯರ ಪ್ರತಿಮೆ ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರ ಹೇಳಿರುವುದಕ್ಕೆ ಯಾವುದೇ ದಾಖಲೆ ಇದ್ದರೆ ಪ್ರತಿಪಕ್ಷಗಳು ನೀಡಲಿ. ಇದು ಕೇವಲ ರಾಜಕೀಯ ದುರುದ್ದೇಶಕ್ಕಾಗಿ ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್ನವರು ಮಾಡುತ್ತಿರುವ ನಾಟಕ. ಮೋದಿಯವರ ಮೇಲೆ ವಿನಾಕಾರಣ ಗೂಬೆ ಕೂರಿಸುವ ಷಡ್ಯಂತ್ರವೆಂದು ಹೇಳಿದರು.

ಹಿಂದಿನ ಲೇಖನಹೊಡೆದಾಟದಲ್ಲಿ ಮಗನಿಗೆ ಚೂರಿಯಿಂದ ಇರಿದ ತಂದೆ
ಮುಂದಿನ ಲೇಖನಕಾಂಗ್ರೆಸ್ ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರಮೇಶ್ ಜಾರಕಿಹೊಳಿ