ಮನೆ ರಾಜಕೀಯ ಬಿಜೆಪಿಯಿಂದ 140 ಕ್ಷೇತ್ರದಲ್ಲಿ ರಾಜ್ಯ ನಾಯಕರ ಪ್ರವಾಸ, 7 ಬೃಹತ್ ಸಮಾವೇಶ

ಬಿಜೆಪಿಯಿಂದ 140 ಕ್ಷೇತ್ರದಲ್ಲಿ ರಾಜ್ಯ ನಾಯಕರ ಪ್ರವಾಸ, 7 ಬೃಹತ್ ಸಮಾವೇಶ

0

ಬೆಂಗಳೂರು(Bengaluru) : ವಿಧಾನಸಭೆ ಚುನಾವಣೆಯ 140 ಕ್ಷೇತ್ರದಲ್ಲಿ ರಾಜ್ಯ ನಾಯಕರ ಪ್ರವಾಸ ಹಾಗೂ ಏಳು ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.

ಚುನಾವಣಾ ದೃಷ್ಟಿಯಿಂದ ಬಿಜೆಪಿ ಎರಡು ತಂಡಗಳಲ್ಲಿ ಪ್ರವಾಸ ಹಮ್ಮಿಕೊಂಡಿದೆ. ಒಂದು ತಂಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇರಲಿದ್ದಾರೆ.

90 ಕ್ಷೇತ್ರಗಳಲ್ಲಿ ಈ ತಂಡ ಪ್ರವಾಸ ಕೈಗೊಳ್ಳಲಿದೆ. ಅಕ್ಟೊಬರ್ 11 ರಿಂದ ಪ್ರವಾಸ ಆರಂಭಗೊಳ್ಳಲಿದ್ದು, ವಾರಕ್ಕೆ ಮೂರು ದಿನಗಳ ಕಾಲ ಪ್ರವಾಸ ನಡೆಯಲಿದೆ.

ಕ್ಷೇತ್ರಗಳಲ್ಲಿ ಜಾತಿ ಪ್ರಮುಖರ ಭೇಟಿ, ಮಠ ಹಾಗೂ ಮಂದಿರಗಳ ಭೇಟಿ ಮತ್ತು ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಎರಡನೇ ತಂಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇರಲಿದ್ದಾರೆ. ಇವರಿಬ್ಬರ ತಂಡವೂ 50 ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲಿದೆ.

ನಳಿನ್ ನೇತೃತ್ವದ ಪ್ರವಾಸ ಈಗಾಗಲೇ ಆರಂಭಗೊಂಡಿದೆ. ಎರಡು ಮೂರು ಕ್ಷೇತ್ರಗಳಿಗೆ ನಳಿನ್ ಭೇಟಿಯನ್ನು ನೀಡಿದ್ದಾರೆ. ಡಿಸೆಂಬರ್ 30 ರೊಳಗೆ ಕ್ಷೇತ್ರ ಪ್ರವಾಸ ಮುಕ್ತಾಯಗೊಳ್ಳಲಿದೆ.

ಏಳು ಬೃಹತ್ ಸಮಾವೇಶ

ಚುನಾವಣಾ ದೃಷ್ಟಿಯಿಂದ ರಾಜ್ಯದಲ್ಲಿ ಏಳು ಕಡೆ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲಿ ಎಸ್ ಸಿ ಸಮಾವೇಶ, ಕಲಬುರಗಿಯಲ್ಲಿ ಒಬಿಸಿ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬಳ್ಳಾರಿಯಲ್ಲಿ ಎಸ್. ಟಿ ಸಮಾವೇಶ, ಮಂಗಳೂರಿನಲ್ಲಿ ಯುವ ಸಮಾವೇಶ ಹಾಗೂ ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.

ಭಾರತ್ ಜೋಡೋ ಅಭಿಯಾನ ಪರಿಣಾಮ ಬೀರುವುದಿಲ್ಲ

ಭಾರತ್ ಜೋಡೋ ಅಭಿಯಾನ ದಲ್ಲಿ ಸೋನಿಯಾ ಗಾಂಧಿ ಪಾಲ್ಗೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸಹಜವಾಗಿ ಎಲ್ಲಾ ಪಕ್ಷದ ಮುಖ್ಯ ಸ್ಥರು ತಮ್ಮ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ಸೋನಿಯಾ ಗಾಂಧಿ ಅರ್ಧ ಕಿ.ಮೀ ನಡೆದು ವಾಪಸ್ಸಾಗಿದ್ದಾರೆ. ಇದ್ಯಾವುದೂ ಪರಿಣಾಮವನ್ನು ಬೀರುವುದಿಲ್ಲ ಎಂದರು.

ಪ್ರಿಯಾಂಕಾ ಗಾಂಧಿ ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕೂ ನಮಗೂ ಸಂಬಂಧ ಇಲ್ಲ, ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ ಎಂದರು.