ಮನೆ ರಾಜ್ಯ ಗ್ಯಾರಂಟಿ ಸಮಾವೇಶದಲ್ಲಿ 15 ಕೋಟಿ ರೂ.ಸಾಲ ವಿತರಣೆ: ಎನ್. ಚಲುವರಾಯಸ್ವಾಮಿ

ಗ್ಯಾರಂಟಿ ಸಮಾವೇಶದಲ್ಲಿ 15 ಕೋಟಿ ರೂ.ಸಾಲ ವಿತರಣೆ: ಎನ್. ಚಲುವರಾಯಸ್ವಾಮಿ

0

ಮಂಡ್ಯ:-ಮಹಿಳಾ ಸಂಘಗಳಿಗೆ ಡಿಸಿಸಿ ಬ್ಯಾಂಕ್ ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಶೂನ್ಯ ಬಡ್ಡಿ ದರದಲ್ಲಿ 15 ಕೋಟಿ ರೂ ಸಾಲ ವಿತರಣೆ ಮಾಡಲಾಗುತ್ತಿದೆ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದ 236 ತಾಲ್ಲೂಕಿನಲ್ಲಿ 223 ತಾಲ್ಲೂಕು ಬರಪೀಡಿತವಾಗಿದ್ದು, ರೈತರಿಗೆ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬರ ಪರಿಹಾರ ಬರುವುದು ತಡವಾಗುತ್ತದೆ ಎಂದು ತಿಳಿದ ಹಿನ್ನಲೆಯಲ್ಲಿ ರೈತರಿಗೆ ಮೊದಲ ಹಂತದಲ್ಲಿ ಪರಿಹಾರವಾಗಿ 2000 ರೂ ನೀಡಲಾಗುತ್ತಿದೆ ಎಂದರು. ರಾಜ್ಯದಲ್ಲಿ ಬರ ಎಂದು ತಿಳಿದ ತಕ್ಷಣ ಕಂದಾಯ ಸಚಿವರೊಂದಿಗೆ ಜಿಲ್ಲೆಗಳ ಪ್ರವಾಸ ಕೈಗೊಂಡು ರೈತರ ಕಷ್ಟಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ವರದಿ ನೀಡಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ 69 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ.ಇದರೊಂದಿಗೆ ಅಭಿವೃದ್ಧಿಯಲ್ಲೂ ಹಿಂದೆ ಉಳಿದಿಲ್ಲ. ವಿವಿಧ ಇಲಾಖೆಯ ಮೂಲಕ ರಸ್ತೆ ಅಭಿವೃದ್ಧಿಗೆ ಪ್ರತಿ ಜಿಲ್ಲೆಗೆ 50 ಕೋಟಿ ರೂ ಅನುದಾನ ನೀಡಲಾಗಿದೆ ಎಂದರು. ಮಂಡ್ಯ ಜಿಲ್ಲೆ ಒಂದರಲ್ಲೇ ಅಂದಾಜು 47 ಲಕ್ಷ ಕುಟುಂಬಗಳಿಗೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಲ್ಲ ಒಂದು ಗ್ಯಾರಂಟಿ ಯನ್ನು ಪಡೆದುಕೊಂಡಿದ್ದಾರೆ ಎಂದರು.

ಬಡವರ ಕೈ ಬಲಪಡಿಸಲು ಗ್ಯಾರಂಟಿ ಯೋಜನೆ ಜಾರಿ;ಕೃಷ್ಣಭೈರೇಗೌಡ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಶಕ್ತಿ ನೀಡುವುದೇ ಸರ್ಕಾರದ ಉದ್ದೇಶವಾಗಿದ್ದು, ನಿಮ್ಮ ಕೈ ಬಲಪಡಿಸಲು ಐದು ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದರು. ಸಂಸಾರದ ಆಧಾರ ಮಹಿಳೆ ಎಂದು ಮನಗಂಡ ಸರ್ಕಾರ ಮಹಿಳೆಯರಿಗೆ ಗೃಹ ಲಕ್ಷ್ನಿ ಯೋಜನೆಯನ್ನು ಜಾರಿ ಮಾಡಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಮಾಡಿದೆ ಎಂದರು.

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರ ಸ್ವಾತಂತ್ರ‍್ಯ ಹಾಗೂ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಮಹಿಳೆ ಕಟ್ಟುಪಾಡುಗಳನ್ನು ಮೀರಿ ಹೊರಬಂದು ಕುಟುಂಬವನ್ನು ಮುನ್ನಡೆಸಿ ಸಮಾಜದಲ್ಲಿ ನಿರ್ಭೀತಿಯಿಂದ ಬದುಕುತ್ತಿದ್ದಾರೆ ಎಂದು ಹೇಳಿದರು.

ಶ್ರೀರಂಗಪಟ್ಟಣ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರು ಮಾತನಾಡಿ ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ ಐದು ಗ್ಯಾರಂಟಿಗಳನ್ನು ಸರ್ಕಾರ ಅನುಷ್ಠಾನ ಮಾಡಿ ನುಡಿದಂತೆ ನಡೆದಿದ್ದೇವೆ ಎಂದರು.

ಗೃಹ ಲಕ್ಷ್ಮಿ,ಅನ್ನ ಭಾಗ್ಯ,ಗೃಹ ಜ್ಯೋತಿ, ಯುವನಿಧಿ, ಶಕ್ತಿ ಯೋಜನೆಗಳು ಜನರನ್ನು ಆರ್ಥಿಕವಾಗಿ ಸಬಲರಾಗಲು ನೀಡಲಾಗಿದೆ. ಇದರೊಂದಿಗೆ ಅಭಿವೃದ್ಧಿಗೂ ಸಹ ಅನುದಾನ ನೀಡಲಾಗಿದೆ ಎಂದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿ.ಡಿ.ಎಸ್, ದೇವರಾಜ,ಗಿರಿಜಾ ಸೇರಿದಂತೆ ಇನ್ನಿತರ ನಾಲೆಗಳ ಅಭಿವೃದ್ಧಿಗೆ ರೂ 200 ಕೋಟಿ ಹಣ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಲೋಕೋಪಯೋಗಿ ರಸ್ತೆ ಅಭಿವೃದ್ಧಿಗೆ ರೂ 40 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ ಕಾವೇರಿ ಕುಡಿಯುವ ನೀರು ಒದಗಿಸಲು ರೂ 20 ಕೋಟಿ, ಯು.ಜಿ.ಡಿ ಅಭಿವೃದ್ಧಿಗೆ ರೂ 25 ಕೋಟಿ ಮೀಸಲಿಡಲಾಗಿದೆ ಎಂದರು. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಡಿ.ಸಿ.ಸಿ.ಬ್ಯಾಂಕ್ ವತಿಯಿಂದ ಬಡ್ಡಿ ರಹಿತವಾಗಿ ಮಹಿಳಾ ಸಂಘಗಳಿಗೆ 7 ರಿಂದ 8 ಕೋಟಿ ರೂ ಹಣ ವಿತರಿಸಲಾಗಿತ್ತಿದೆ.ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಾತನಾಡಿ ಗ್ಯಾರಂಟಿ ಯೋಜನೆಗಳು ಸಾರ್ವಜನಿಕರಿಗೆ ಉಪಯುಕ್ತವಾಗಿದ್ದು,ಸರ್ಕಾರ ಮನೆ ಬಾಗಿಲಿಗೆ ಯೋಜನೆಗಳನ್ನು ಒದಗಿಸಿದೆ.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಉಳುವವರಿಗೆ ಭೂಮಿ ಎಂದು ರೈತರ ಪರವಾಗಿ ನಿಂತರು ಅವರು ಸದಾ ಎಲ್ಲರಿಗೂ ಮಾದರಿ ಎಂದರು.

ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ವಿಧಾನಸಭಾ ಶಾಸಕರಾದ ಪಿ.ರವಿ ಕುಮಾರ್,ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್, ವರಿಷ್ಠಾಧಿಕಾರಿ ಎನ್.ಯತೀಶ್, ಡಿಸಿಸಿ ಬ್ಯಾಂಕ್ ಕಾರ್ಯನಿರ್ವಾಹಕ ಅಧಿಕಾರಿ ವನಜಾಕ್ಷಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.